ಚೆನ್ನೈ: ತಮಿಳುನಾಡಿನ ಕಡಲೂರು ಬಳಿಯ ಸೆಮ್ಮಂಕುಪ್ಪಂನಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸಿಗೆ ಪ್ಯಾಸೆಂಜರ್ ರೈಲೊಂದು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು, ಚಾಲಕ ಸೇರಿ ನಾಲ್ಕು ಮಂದಿ ಗಾಯಗೊಂಡಿರುವ ಘಟನೆ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸು ಕಡಲೂರು ಜಿಲ್ಲೆಯ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹಳಿ ದಾಟುತ್ತಿದ್ದ ಸಂದರ್ಭ ಪ್ಯಾಸೆಂಜರ್ ರೈಲು ಡಿಕ್ಕಿಯಾಗಿದೆ ಎಂದು ವರದಿಯಾಗಿದೆ.
ಡಿಕ್ಕಿಯ ರಭಸಕ್ಕೆ ಬಸ್ಸು ಕೆಲ ದೂರ ಎಸೆಯಲ್ಪಟ್ಟಿದ್ದು ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕು ಮಂದಿ ಗಂಭೀರ ಗಾಯಗೊಂಡಿದ್ದು ಅವರನ್ನು ಕಡಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಘಟನಾ ಸಂಬಂಧ ರೈಲ್ವೆ ಇಲಾಖೆ ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.