46
ನೆಲಮಂಗಲ: ನೆಲಮಂಗಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಾಯಿಯೊಬ್ಬಳು ತನ್ನ 45 ದಿನಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಲೆಗೈದ ಘಟನೆ ನಡೆದಿದೆ.
ಆರೋಪಿ ರಾಧಾ (28) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ವಿಶ್ವೇಶ್ವರಪುರದಲ್ಲಿ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದ ರಾಧಾ-ಪವನ್ ದಂಪತಿಗೆ ಗಂಡು ಮಗು ಜನಿಸಿತ್ತು. ಪವನ್ ಮದ್ಯವ್ಯಸನಿಯಾಗಿದ್ದು, ರಾತ್ರಿ ತಾನು ಓಡಿಸುತ್ತಿದ್ದ ಆಟೋದಲ್ಲಿಯೇ ಮಲಗುತ್ತಿದ್ದ ಎಂದು ಹೇಳಲಾಗಿದೆ. ದಂಪತಿ ನಡುವೆ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎನ್ನಲಾಗಿದೆ.
ಕುಡುಕ ಗಂಡ, ಎದೆಹಾಲಿನ ಕೊರತೆ, ಮಗುವಿನ ಆರೈಕೆ ಕಷ್ಟವಾಗಿರುವುದು, ಬಡತನ ಮುಂತಾದ ಅನೇಕ ಕಾರಣಗಳಿಂದ ಮಗುವನ್ನು ಕೊಂದಿರುವುದಾಗಿ ರಾಧಾ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.