ಬೆಂಗಳೂರು: ಜಯನಗರ ಠಾಣೆ ವ್ಯಾಪ್ತಿಯ ಪಟಾಲಮ್ಮ ದೇವಸ್ಥಾನದ ರಸ್ತೆಯಲ್ಲಿ ಕರೆ ಮಾಡಲು ಕೊಟ್ಟ ಫೋನ್ ವಾಪಸ್ ಕೇಳಿದಕ್ಕೆ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್‌ಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಸೆಕ್ಯುರಿಟಿ ಗಾರ್ಡ್ ಜಯನಗರ ನಿವಾಸಿ ಪರ್ವಿಂದರ್ (40) ಎಂದು ತಿಳಿದು ಬಂದಿದೆ.
ಈ ಸಂಬಂಧ ಅಸ್ಗರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪಟಾಲಮ್ಮ ದೇವಸ್ಥಾನದ ರಸ್ತೆಯ ಪಕ್ಕದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಮಿಥುನ್ ಕುಮಾರ್ ಎಂಬವರು ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದರು.
ಈ ಸಂದರ್ಭ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ “ನನ್ನ ಮೊಬೈಲ್ ಹಾಳಾಗಿದೆ, ಒಂದು ಕರೆ ಮಾಡಬೇಕು’ ಎಂದು ಮಿಥುನ್ ಕುಮಾರ್ ಬಳಿ ಕೇಳಿದ್ದ. ಆಗ ಮಿಥುನ್ ಕುಮಾರ್ ತನ್ನ ಮೊಬೈಲ್ ನೀಡಿದ್ದರು. ಎರಡು ಕರೆಗಳನ್ನು ಮಾಡಿದ್ದ ಆರೋಪಿ ಬಳಿ ಮಿಥುನ್ ಕುಮಾರ್ ಮೊಬೈಲ್ ವಾಪಸ್ ಕೇಳಿದ್ದರು. ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದ ಆರೋಪಿ, ತನ್ನ ದ್ವಿಚಕ್ರ ವಾಹನದಲ್ಲಿದ್ದ ಮಾರಕಾಸ್ತ್ರ ತೆಗೆದು ಮಿಥುನ್ ಕುಮಾರ್ ಮೇಲೆ ಬೀಸಿದ್ದ. ಈ ವೇಳೆ ಜಗಳ ಬಿಡಿಸಲು ಬಂದ ಸೆಕ್ಯುರಿಟಿ ಗಾರ್ಡ್ ಪರ್ವಿಂದ್ ಮೇಲೆಯೂ ಮಾರಕಾಸ್ತ್ರ ಬೀಸಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಸಂಪೂರ್ಣ ದೃಶ್ಯಾವಳಿ ಕಟ್ಟಡ ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಘಟನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಪರ್ವಿಂದರ್ ಕೈಗಳಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಟೈಯರ್ ಲೆಥ್ ಯಂತ್ರದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಮದ್ಯದ ಅಮಲಿನಲ್ಲಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.