ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಕಚೇರಿಯಲ್ಲೇ ಬ್ಯಾಂಕ್ ಮ್ಯಾನೇಜರ್ ವೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಅಧಿಕಾರಿಯನ್ನು ಶಿವಶಂಕರ್ ಮಿತ್ರ (40) ಎಂದು ಗುರುತಿಸಲಾಗಿದೆ.
ಶಿವಶಂಕರ್ ಮಿತ್ರ ಅವರು ಬಾರಾಮತಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ವೊಂದರಲ್ಲಿ ಹಿರಿಯ ಮ್ಯಾನೇಜರ್ ಆಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಗುರುವಾರ ತಮ್ಮ ಸಿಬ್ಬಂದಿಗಳಿಗೆ ಬೇಗ ಬೇಗ ಕೆಲಸ ಮುಗಿಸಿ ಮನೆಗೆ ತೆರಳುವಂತೆ ತಿಳಿಸಿದ್ದಾರೆ. ಇದಾದ ಬಳಿಕ ರಾತ್ರಿ ಒಂಬತ್ತು ಗಂಟೆಗೆ ಕಾವಲುಗಾರನನ್ನೂ ಮನೆಗೆ ಕಳುಹಿಸಿದ್ದ ಮ್ಯಾನೇಜರ್ ಮಧ್ಯರಾತ್ರಿ ಕಚೇರಿ ಒಳಗಿರುವ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
ರಾತ್ರಿಯಾದರೂ ಪತಿ ಮನೆಗೆ ಬಾರದೇ ಇದ್ದುದರಿಂದ ಪತ್ನಿ ಕರೆ ಮಾಡಿದ್ದು ಆದರೆ ಪತಿ ಕರೆ ಸ್ವೀಕರಿಸಲಿಲ್ಲ, ಇದರಿಂದ ಗಾಬರಿಗೊಂಡು ಮಧ್ಯರಾತ್ರಿ ಬ್ಯಾಂಕ್ ಕಡೆಗೆ ಬಂದಾಗ ಬ್ಯಾಂಕ್ ಒಳಗೆ ದೀಪ ಉರಿಯುತ್ತಿರುವುದು ಕಂಡುಬಂದಿದೆ. ಹಾಗಾಗಿ ಪತಿ ಕೆಲಸ ಮಾಡುತ್ತಿರಬೇಕು ಎಂದು ಎಣಿಸಿ ಬಾಗಿಲು ತೆರೆಯಲು ಹೇಳಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದರಿಂದ ಭಯಗೊಂಡ ಅವರು ಬ್ಯಾಂಕ್ ನ ಇತರ ಸಿಬ್ಬಂದಿಗೆ ಕರೆ ಮಾಡಿ ವಿಚಾರ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅವರು ಬ್ಯಾಂಕಿನ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಶಿವಶಂಕರ್ ಮಿತ್ರ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ನೇಣು ಬಿಗಿದುಕೊಂಡಿದ್ದ ಮಿತ್ರ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿ ಪರಿಶೀಲಿಸಿದ ವೇಳೆ ಮೃತಪಟ್ಟಿರುವುದು ದೃಢಪಟ್ಟಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಆತ್ಮಹತ್ಯೆ ಮಾಡಿಕೊಂಡ ಜಾಗದಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ಅದರಲ್ಲಿ ವಿಪರೀತ ಕೆಲಸದ ಒತ್ತಡದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದಾಗಿ, ಅಲ್ಲದೆ ಇದರ ಹಿಂದೆ ಯಾವುದೇ ವ್ಯಕ್ತಿಯ ಕೈವಾಡ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವ ಐದು ದಿನಗಳ ಮೊದಲು, ಹೆಚ್ಚುತ್ತಿರುವ ಕೆಲಸದ ಒತ್ತಡ ನಿವಾರಿಸಲು ಅಲ್ಲದೆ ಮಾನಸಿಕವಾಗಿ ಸ್ಥಿರವಾಗಿರಲು ಸ್ವಯಂಪ್ರೇರಿತ ನಿವೃತ್ತಿ ಕೋರಿ ಬ್ಯಾಂಕ್ ಆಡಳಿತ ಮಂಡಳಿಗೆ ಪತ್ರ ಬರೆದಿದ್ದರು. ಆದರೆ ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎನ್ನಲಾಗಿದೆ.
ಈ ಕುರಿತು ಪುಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.