ಹೊಳೆಹೊನ್ನೂರು: ದೆವ್ವ ಬಿಡಿಸುವ ನೆಪದಲ್ಲಿ ನಡೆದ ಪೂಜೆ ವೇಳೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸಮೀಪದ ಜಂಬರಗಟ್ಟೆಯಲ್ಲಿ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮೃತ ಮಹಿಳೆ ಹೊಸ ಜಂಬರಘಟ್ಟೆ ಗ್ರಾಮದ ಗೀತಮ್ಮ (45) ಎಂದು ತಿಳಿದು ಬಂದಿದೆ.
ಭಾನುವಾರ ರಾತ್ರಿ ಗೀತಮ್ಮನನ್ನು ಆಶಾ ಎಂಬವರ ಬಳಿಗೆ ಕರೆದುಕೊಂಡು ಬಂದಿದ್ದರು. ಆಶಾಗೆ ಕಳೆದ 15 ದಿನಗಳಿಂದ ಗ್ರಾಮದ ದೇವರೊಂದು ಮೈ ಮೇಲೆ ಬರುತ್ತಿತ್ತು ಎಂದು ಹೇಳಲಾಗಿದೆ. ನಿನ್ನ ತಾಯಿಯ ದೇಹದಲ್ಲಿ ದೆವ್ವವೊಂದು ಸೇರಿದೆ. ಪೂಜೆ ಮಾಡಿ ಹೊರ ಹಾಕುತ್ತೇನೆ ಎಂದು ಮೃತ ಗೀತಮ್ಮನ ಪುತ್ರ ಸಂಜಯ್‌ಗೆ ತಿಳಿಸಿದ್ದಳು ಎಂದು ತಿಳಿದು ಬಂದಿದೆ.
ಬಳಿಕ ಗೀತಮ್ಮನ ಮನೆ ಮುಂದೆ ಪೂಜೆ ಮಾಡಿದ್ದಾರೆ. ಈ ವೇಳೆ ಗೀತಮ್ಮನ ತಲೆ ಮೇಲೆ ಕಲ್ಲು ಹೊರಿಸಲಾಗಿದೆ. ಬಳಿಕ ಗೀತಮ್ಮ ಕೂಡ ದೆವ್ವ ಬಂದಂತೆ ವರ್ತಿಸಿದ್ದಾಳೆ. ಆಗ ಮರದ ಟೊಂಗೆಯೊಂದನ್ನು ಕಿತ್ತುಕೊಂಡು ಹಲ್ಲೆ ಮಾಡಿದ್ದಲ್ಲದೇ ತಣ್ಣೀರು ಎರಚಲಾಗಿದೆ. ಆಗ ಗೀತಮ್ಮ ಕುಸಿದು ಬಿದ್ದಿದ್ದಾಳೆ. ದೆವ್ವ ಬಿಟ್ಟಿದೆ ಎಂದು ಮನೆಗೆ ಕರೆದುಕೊಂಡು ಬಂದಿದ್ದಾರೆ. ಅಸ್ವಸ್ಥಳಾದ ಗೀತಮ್ಮನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು ವೈದ್ಯರು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಆಶಾಳನ್ನು ಪೊಲೀಸರು ಬಂಧಿಸಿದ್ದಾರೆ.