ಬೆಂಗಳೂರು: ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಮ ವೈಫಲ್ಯದಿಂದ ಬೇಸರಗೊಂಡ ಪ್ರಿಯಕರನೊಬ್ಬ ಮೇಲು ಸೇತುವೆಯಿಂದ ಜಿಗಿದು ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಆತ್ಮಹ*ತ್ಯೆಗೆ ಶರಣಾಗಿರುವ ಯುವಕ ಹೆಬ್ಬಾಳದ ಬಳಿಯ ಶಿವಶಂಕರ ಲೇಔಟ್ ನಿವಾಸಿ ಮುನಿರಾಜು (29) ಎಂದು ತಿಳಿದು ಬಂದಿದೆ.
ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ (ಕೆಐಎಎಲ್) ಮೇಲ್ಸೇತುವೆಯಲ್ಲಿ ಭಾನುವಾರ ತಡರಾತ್ರಿ ದುರ್ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇಂದಿರಾನಗರದಲ್ಲಿ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿದ್ದ ಮುನಿರಾಜು, ಹಲವು ವರ್ಷಗಳಿಂದ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದೊಂದು ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ, ಇಬ್ಬರು ದೂರವಾಗಿದ್ದರು. ಈ ನಡುವೆ ಆ ಯುವತಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದು, ಆತನ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದಳು. ಅದನ್ನು ನೋಡಿ ಮನನೊಂದ ಮುನಿರಾಜು, ಸ್ನೇಹಿತರನ್ನು ಭೇಟಿ ಮಾಡಿ ಬರುವುದಾಗಿ ಮನೆಯಲ್ಲಿ ತಿಳಿಸಿ ಭಾನುವಾರ ರಾತ್ರಿ ಹೊರ ಹೋಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಡರಾತ್ರಿ 11.15ರ ಸುಮಾರಿಗೆ ಮುನಿರಾಜು, ತನ್ನ ಮಾಜಿ ಪ್ರೇಯಸಿಗೆ ಕೊನೆಯ ಬಾರಿಗೆ ಕರೆ ಮಾಡಿ ಮಾತನಾಡಿದ್ದಾನೆ. ಬಳಿಕ ಕೆಐಎಎಲ್ ರಸ್ತೆಗೆ ಬಂದು ಮೇಲ್ಸೇತುವೆಯಲ್ಲಿ ಬೈಕ್ ನಿಲ್ಲಿಸಿ, ಕೆಳಗೆ ಜಿಗಿದು ಆತ್ಮಹ*ತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಲ್ಸೇತುವೆ ಕೆಳಗಿನ ಮಾಲ್ ಆಫ್ ಏಷ್ಯಾ ಮುಂಭಾಗದ ರಸ್ತೆಯಲ್ಲಿ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮ ವೈಫಲ್ಯದಿಂದಲೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುನಿರಾಜು ತಂದೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.