ಬೆಂಗಳೂರು: ಕೋರ ಮಂಗಲ ಠಾಣಾ ವ್ಯಾಪ್ತಿಯಲ್ಲಿ ಯುವತಿಯ ವಿಚಾರಕ್ಕೆ ಎರಡು ಗುಂಪುಗಳ ನಡುವೆ ನಡೆದ ಜಗಳದ ವೇಳೆ ಒಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದ್ದು, ಈ ಸಂಬಂಧ ಕೇರಳ ಮೂಲದ ಇಬ್ಬರು ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ಕೇರಳ ಮೂಲದ ಜಿಪ್ಪನ್ ಜಾರ್ಜ್ (29), ಮೆರಿಕ್(29) ಮತ್ತು ರಿಫಾಯ್ (22) ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಯದು ಎಂಬಾತ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾನೆ. ಜೂ. 7ರ ರಾತ್ರಿ ಪಬ್‌ವೊಂದರ ಮುಂಭಾಗ ಈ ಗಲಾಟೆ ನಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜೂ.7ರ ತಡರಾತ್ರಿ 1 ಗಂಟೆ ಸುಮಾರಿಗೆ ಕೋರಮಂಗಲದ ಖಾಸಗಿ ಕಾಲೇಜಿನ ರಸ್ತೆಯ ಸಮೀಪ ಈ ಘಟನೆ ನಡೆದಿತ್ತು. ಆರೋಪಿಗಳು ಸಮೀಪದ ಪಬ್ ಹೋಗಿದ್ದು, ಅದೇ ಪಬ್‌ಗೆ ಯುವತಿ ಹಾಗೂ ಆಕೆಯ ಸ್ನೇಹಿತರು ಹೋಗಿದ್ದಾರೆ. ಒಳಗಡೆ ಎಲ್ಲರೂ ಸ್ನೇಹಿತರಂತೆ ಮಾತನಾಡಿದ್ದಾರೆ. ಹೊರಗಡೆ ಬಂದಾಗ ಆರೋಪಿಗಳು ಮದ್ಯದ ಅಮಲಿನಲ್ಲಿ ಯುವತಿಯನ್ನು ಮಾತನಾಡಿಸಲು ಮುಂದಾಗಿದ್ದಾರೆ. ಆಗ ಗಾಯಾಳು ಯದು ಎಂಬಾತ ಪ್ರಶ್ನಿಸಿದ್ದಾನೆ. ಆಗ ಆರೋಪಿಗಳು ಯದು ಮೇಲೆ ಹಲ್ಲೆ ನಡೆಸಿದ್ದಾರೆ. ಅದನ್ನು ಪ್ರಶ್ನಿಸಿ ಯುವತಿ ಹಾಗೂ ಆಕೆಯ ಸ್ನೇಹಿತರು ಆರೋಪಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಅದು ವಿಕೋಪಕ್ಕೆ ಹೋದಾಗ ಆರೋಪಿಗಳು ಯುವತಿಯ ಸ್ನೇಹಿತರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದರು. ಎರಡೂ ಗುಂಪಿನ ಹೊಡೆದಾಟದ ದೃಶ್ಯ ಸ್ಥಳದಲ್ಲಿದ್ದವರ ಮೊಬೈಲ್ ನಲ್ಲಿ ಸೆರೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.