ಮಂಗಳೂರು: ಅಡ್ಯಾರ್ ಸೋಮನಾಥ ಕಟ್ಟೆ ಬಳಿ ಶನಿವಾರ ತಡರಾತ್ರಿ ಸಂಭವಿಸಿದ ಕಾರು ಅಪಘಾತ ದಲ್ಲಿ ಗಂಭೀರ ಗಾಯಗೊಂಡ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮೃತ ಯುವಕ ಯೂಸೂಫ್ ಅರ್ಬಾಝ್ (25) ಎಂದು ತಿಳಿದು ಬಂದಿದೆ.
ದಿಲ್ಲಿಯಿಂದ ರೈಲಿನಲ್ಲಿ ಬರುತ್ತಿದ್ದ ಸ್ನೇಹಿತ ಮೌಸೂಕ್ ಅವರನ್ನು ಕರೆತರಲು ಶನಿವಾರ ರಾತ್ರಿ ಬಂಟ್ವಾಳದ ಸಜಿಪದಿಂದ ಆದಿಲ್ ಎಂಬವರ ಕಾರಿನಲ್ಲಿ ನಾಲ್ವರು ಮಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಆದಿಲ್ ಚಾಲಕನಾಗಿ, ಪಕ್ಕದಲ್ಲಿ ಮುನೀರ್, ಹಿಂದೆ ಯೂಸುಫ್ ಅರ್ಬಾಝ್, ಬಿ.ಎಂ. ಅಬ್ದುಲ್ ಮಝೂಕ್ ಕುಳಿತಿದ್ದರು.
ರಾತ್ರಿ ಸುಮಾರು 12.45ರ ಸಮಯದಲ್ಲಿ ಅಡ್ಯಾರ್ ಸೋಮನಾಥ ಕಟ್ಟೆಯಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಹಿಂದೆ ಕುಳಿತಿದ್ದ ಅರ್ಬಾಝ್, ಮಝೂಕ್ ರಸ್ತೆಗೆ ಎಸೆಯಲ್ಪಟ್ಟರು. ಅರ್ಬಾಝ್ ತಲೆಗೆ ಗಂಭೀರ ಗಾಯವಾಗಿದ್ದು, ಮಝೂಕ್‌ಗೆ ತೊಡೆ, ಮುಖಕ್ಕೆ ಗಾಯವಾಗಿದೆ. ಚಾಲಕ ಆದಿಲ್ ಸೀಟ್ ಬೆಲ್ಟ್ ಹಾಕಿದ್ದ ಕಾರಣ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಪಡೀಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಯೂಸೂಫ್ ಅರ್ಬಾಝ್ (25) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.