ಕಾರವಾರ: ಭಟ್ಕಳ ನಗರವನ್ನು ಸ್ಪೋಟಿಸುವುದಾಗಿ ಇ-ಮೇಲ್ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಭಟ್ಕಳ ಪೊಲೀಸರು ಹಾಗೂ ಸೈಬರ್ ತನಿಖಾ ವಿಭಾಗ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ದೆಹಲಿಯ ಪಟೇಲನಗರ, ಬೆಲಜತನಗರ ನಿವಾಸಿ ನಿತಿನ್ ಶರ್ಮಾ ಅಲಿಯಾಸ್ ಖಾಲೀದ್ ಎಂದು ಗುರುತಿಸಲಾಗಿದೆ.
ತಮಿಳುನಾಡು ಮೂಲದ ಕಣ್ಣನ್ ಗುರುಸ್ವಾಮಿ ಎಂಬವರ ಮೊಬೈಲ್ ಬಳಸಿ ಆರೋಪಿ ಇ-ಮೇಲ್ ಕಳುಹಿಸಿದ್ದ ಎಂದು ಹೇಳಲಾಗಿದೆ.
ಆರೋಪಿತನ ಮೇಲೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇದೇ ರೀತಿ ಹುಸಿ ಬಾಂಬ್ ಬೆದರಿಕೆಗೆ ಸಂಬಂಧಿಸಿ ಸುಮಾರು 15 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಈತ ಈ ಹಿಂದೆ ಉತ್ತರಾಖಂಡದ ನೈನಿತಾಲ್ ನಗರವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿರುವ ಕಾರಣ ಬಂಧಿಸಲ್ಪಟ್ಟು ನ್ಯಾಯಾಲಯದಿಂದ 8 ತಿಂಗಳ ಶಿಕ್ಷೆಗೆ ಗುರಿಯಾಗಿದ್ದ ಎಂದು ತಿಳಿದು ಬಂದಿದೆ.
ಆರೋಪಿತನ ಮೇಲೆ ಈಗಾಗಲೇ ಕೇರಳ ರಾಜ್ಯದಲ್ಲಿ 6, ದೆಹಲಿಯಲ್ಲಿ 1, ಮಧ್ಯಪ್ರದೇಶಲ್ಲಿ 1, ಪುದುಚೆರಿಯಲ್ಲಿ 2, ಉತ್ತರಾಖಂಡದಲ್ಲಿ 1, ಓಡಿಸ್ಸಾ 1, ಆಂಧ್ರಪ್ರದೇಶ 1 ಮತ್ತು ಕರ್ನಾಟಕದಲ್ಲಿ 3 ಪ್ರಕರಣಗಳು ದಾಖಲಾಗಿವೆ.
ಜುಲೈ 6 ರಂದು ಮೈಸೂರು ಪೊಲೀಸರಿಂದ ಬಂಧಿಸಲ್ಪಟ್ಟು ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿರುವ ಆರೋಪಿತನನ್ನು ಜುಲೈ 10 ರಂದು ವಿಚಾರಣೆಗಾಗಿ ಕೇರಳದ ಮುನ್ನಾರ ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆದುಕೊಂಡು ಹೋಗಿದ್ದರು.
ಈ ಸಂದರ್ಭ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದಿದ್ದ ತಮಿಳುನಾಡು ತೇನಿಯ ತಿರುಮಲಾಪುರಂ ನಿವಾಸಿ ಕನ್ನನ್ ಗುರುಸ್ವಾಮಿ ಎಂಬವರ ಜೊತೆ ಪರಿಚಯ ಮಾಡಿಕೊಂಡ ಆರೋಪಿತ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಮಾತನಾಡಿ ಮನೆಗೆ ತುರ್ತು ಕರೆ ಮಾಡಬೇಕು ಎಂದು ತಿಳಿಸಿ ಮೊಬೈಲ್ ಪಡೆದುಕೊಂಡು ಜುಲೈ 10 ರಂದು ಬೆಳಿಗ್ಗೆ 7 ಗಂಟೆಯಿಂದ 7.30 ರ ಸಮಯದಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ಇ ಮೇಲ್ ಸಂದೇಶ ಕಳುಹಿಸಿರುವುದಾಗಿ ತಿಳಿದು ಬಂದಿದೆ.
ಕಣ್ಣನ್ ಗುರುಸ್ವಾಮಿ ಮೊಬೈಲ್ ಫೋನ್ ಮೂಲಕ ಈ ಮೇಲ್ ಸಂದೇಶ ಬಂದ ನಂತರ ಆ ಕುರಿತು ತನಿಖೆಗಿಳಿದ ಪೊಲೀಸರ ತಂಡ ತಮಿಳುನಾಡಿಗೆ ತೆರಳಿ ಅಲ್ಲಿ ಕನ್ನನ್ ಗುರುಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನಂತರ ಕೇರಳದ ಮುನ್ನಾರ ಪೊಲೀಸ್ ಠಾಣೆಗೆ ತೆರಳಿ ಆರೋಪಿತ ಕುರಿತು ಮಾಹಿತಿ ಸಂಗ್ರಹಿಸಿ ಮೈಸೂರಿನ ಕೇಂದ್ರ ಕಾರಾಗೃಹದಿಂದ ಬಾಡಿ ವಾರೆಂಟ್ ಮೇರೆಗೆ ಭಟ್ಕಳಕ್ಕೆ ಕರೆ ತಂದಿದ್ದಾರೆ ಎಂದು ತಿಳಿದು ಬಂದಿದೆ.