ಉಳ್ಳಾಲ: ದೇರಳಕಟ್ಟೆ ಸಮೀಪ ಬೊಲೆರೋ ವಾಹನ ಡಿಕ್ಕಿಯಾಗಿ ಕೇರಳ ಮೂಲದ ಪಾದಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.
ಮೃತ ಮಹಿಳೆಯನ್ನು ಪಾಲಕ್ಕಾಡ್ ಚಂದ್ರನಗರದ ಶಾಂತಿಕಾಲನಿ ನಿವಾಸಿ ಗೋಪ ಕುಮಾರ್ ಮೆನನ್ ಅವರ ಪತ್ನಿ ಶ್ರೀಕಮಲಾ (56) ಎಂದು ಗುರುತಿಸಲಾಗಿದೆ.
ದೇರಳಕಟ್ಟೆ ಸಮೀಪದ ಬ್ಯಾರೀಸ್ ಟರ್ನಿಂಗ್ ಪಾಯಿಂಟ್ ಸಮೀಪ ಪಕ್ಕದ ಅಪಾರ್ಟ್‌ಮೆಂಟ್‌ಗೆ ರಸ್ತೆ ದಾಟುತ್ತಿದ್ದಾಗ ವಾಹನವೊಂದು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಕಮಲಾ ಅವರ ಪುತ್ರಿ ದೇರಳಕಟ್ಟೆಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಕಲಿಯುತ್ತಿದ್ದು, ಪರೀಕ್ಷೆ ಸಮಯವಾಗಿದ್ದರಿಂದಾಗಿ ಎರಡು ದಿನಗಳ ಹಿಂದಷ್ಟೇ ತಾಯಿ ಕೇರಳದಿಂದ ಬಂದಿದ್ದರು ಎಂದು ಹೇಳಲಾಗಿದೆ.
ಈ ಕುರಿತು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.