ನೂಹ್: ಹಣ ಕೊಡಲಿಲ್ಲವೆಂದು ಮಗನೊಬ್ಬ ಹೆತ್ತ ತಾಯಿಯನ್ನೇ ಕಡಿದು ಕೊಲೆ ಮಾಡಿರುವ ಘಟನೆ ಹರ್ಯಾಣದ ನೂಹ್ನ ಜೈಸಿಂಗ್‌ಪುರ ಗ್ರಾಮದಲ್ಲಿ ಶನಿವಾರ ವರದಿಯಾಗಿದೆ.
ಕೇವಲ 20 ರೂಪಾಯಿಗಾಗಿ 56 ವರ್ಷದ ತಾಯಿಯನ್ನು ಮಗ ಹತ್ಯೆ ಮಾಡಿದ್ದಾನೆ.
ಮಗ ಮಾದಕ ವ್ಯಸನಿಯಾಗಿದ್ದು, ಬಹಳ ದಿನಗಳಿಂದ ಗಾಂಜಾ ಮತ್ತು ಅಫೀಮು ಸೇವಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಳಿಕ ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ತಾಯಿ ಜೊತೆಯೇ ಒಂದೇ ಮನೆಯಲ್ಲಿ ಆತ ಇಡೀ ರಾತ್ರಿ ಕಳೆದಿದ್ದಾನೆ.
ಶನಿವಾರ ರಾತ್ರಿ ಜೆಮ್ಶೆಡ್ ಎಂಬಾತ ತಾಯಿ ರಜಿಯಾ ಬಳಿ 20 ರೂ. ಕೊಡುವಂತೆ ಕೇಳಿದ್ದ. ಆದರೆ ಅವರು ನಿರಾಕರಿಸಿದ್ದರು. ಅದಕ್ಕೆ ಕೋಪಗೊಂಡ ಮಗ ತಾಯಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕುರಿತು ಪ್ರಕರಣ ದಾಖಲಿಸಲಾಗಿದೆ, ಮರಣೋತ್ತರ ಪರೀಕ್ಷೆಯ ನಂತರ ರಾಜಿಯಾ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.