ಮಂಗಳೂರು: ಮಾದಕವಸ್ತು ಪೂರೈಕೆ ಪ್ರಕರಣ ಸಂಬಂಧ ಮಂಗಳೂರು ನಗರ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮಧ್ಯಪ್ರದೇಶದ ಬರ್ವಾನಿ ಜಿಲ್ಲೆ ಮೋಹನ್ ಪಡವಾ ಗ್ರಾಮದ ಮಾಯಾರಾಮ್(32), ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ಚೋಪ್ಪಾದ ಪ್ರೇಮಸಿಂಗ್ ರಾಮ ಪವಾರ(48) ಮತ್ತು ಅನಿಲ್ ಪ್ರಕಾಶ್ ಕೋಲಿ(35) ಎಂದು ತಿಳಿದು ಬಂದಿದೆ.
ಈ ಪ್ರಕರಣವು ಜುಲೈ 2 ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಮಾದಕವಸ್ತು ಸೇವನೆ ಮಾಡುವವರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಹಂತ ಹಂತವಾಗಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಿಂದ ಮಾದಕ ವಸ್ತುಗಳನ್ನು ಮಂಗಳೂರು ನಗರಕ್ಕೆಪೂರೈಕೆ ಮಾಡುವ ಆರು ಜನರನ್ನು ಪೊಲೀಸರು ಪತ್ತೆ ಮಾಡಿ ಈಗಾಗಲೇ ದಸ್ತಗಿರಿ ಮಾಡಿದ್ದರು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಳಿಕ ಪ್ರಕರಣ ಸಂಬಂಧ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಕ್ಕೆ ವಿಶೇಷ ತಂಡವನ್ನು ಕಳುಹಿಸಿ ಮೂರು ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ. ಈ ಮೂವರು ಆರೋಪಿಗಳನ್ನು ಜುಲೈ 9ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್ ಗಳು ಹಾಗೂ 1,78,920 ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.