ಮಂಗಳೂರು: ನಂದಿಗುಡ್ಡೆಯ ಆಶ್ರಮವೊಂದರಲ್ಲಿ ಕೇರ್ ಟೇಕರ್ ಆಗಿದ್ದ ದಾವಣಗೆರೆ ಹರಪನಹಳ್ಳಿ ಮೂಲದ ಯುವತಿಯೋರ್ವಳು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ಯುವತಿ ಐಶ್ವರ್ಯಾ ಸಿ. (20) ಎಂದು ತಿಳಿದು ಬಂದಿದೆ.
ಶೋಭಾ ಜೀವನ್ ಅಂಚನ್ ಅವರು ಜಪ್ಪು ಬಪ್ಪಾಲ್ ನಂದಿಗುಡ್ಡೆಯಲ್ಲಿರುವ ಮನೆಯಲ್ಲಿ ಎರಡೂವರೆ ವರ್ಷದಿಂದ ಹಿರಿಯರ ಆಶ್ರಮವೊಂದನ್ನು ನಡೆಸುತ್ತಿದ್ದು ಐಶ್ವರ್ಯಾ ಅಲ್ಲಿ ಕೇರ್‌ಟೇಕರ್ ಆಗಿದ್ದರು ಎಂದು ತಿಳಿದು ಬಂದಿದೆ.
ಒಂದು ವರ್ಷದಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಆಕೆ ಜು. 6ರಂದು ಊರಿನಲ್ಲಿ ಮನೆ ಕೆಲಸ ನಡೆಯುತ್ತಿದ್ದು, ಹಣ ಬೇಕು ಎಂದು ಶೋಭಾ ಅವರಲ್ಲಿ ಕೇಳಿದ್ದರು. ಅದರಂತೆ ಶೋಭಾ ಅವರು ಆಕೆ ನೀಡಿದ ಪ್ರಶಾಂತ್ ಚಾಮುಂಡಪ್ಪ ಎಂಬವರ ಗೂಗಲ್ ಪೇ ನಂಬರ್‌ಗೆ ಹಣ ಕಳುಹಿಸಿದ್ದರು. ಬಳಿಕ ರಾತ್ರಿ 11 ಗಂಟೆಗೆ ನೋಡಿದಾಗ ಐಶ್ವರ್ಯಾ ಮನೆಯಲ್ಲಿ ಇರಲಿಲ್ಲ. ಎಲ್ಲ ಕಡೆ ಹಡುಕಿದರೂ ಪತ್ತೆಯಾಗದ ಕಾರಣ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಸುಮಾರು 5.2 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಪೂರ ಶರೀರ, ಕೋಲು ಮುಖ. ನೇವಿ ಬ್ಲೂ ಬಣ್ಣದ ಚೂಡಿದಾರ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ ಭಾಷೆ ಬಲ್ಲವರಾಗಿದ್ದಾರೆ. ಈ ಚಹರೆಯ ಯುವತಿ ಪತ್ತೆಯಾದಲ್ಲಿ ಪಾಂಡೇಶ್ವರ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.