ವಿಟ್ಲ: ವಿಟ್ಲ-ಮುಡಿಪು-ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಕೊಲ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43) ಎಂದು ತಿಳಿದು ಬಂದಿದೆ.
ಸೋಮವಾರ ಬೆಳಗ್ಗೆ ವಿಟ್ಲದಿಂದ ಹೊರಟಿದ್ದ ಬಸ್ಸಿಗೆ ಕೊಡಂಗಾಯಿಯಲ್ಲಿ ಏರಿದ್ದ ಚಿದಾನಂದ ಅವರು ಕುಡ್ತಮುಗೇರು ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ನಿಲ್ದಾಣದಲ್ಲಿ ಬಸ್ ನಿಲ್ಲಿಸುವ ಮುನ್ನ ಅವರು ಮೆಟ್ಟಿಲಿನಲ್ಲಿ ನಿಂತಿದ್ದು ಆಯತಪ್ಪಿ ರಸ್ತೆಗೆ ಬಿದ್ದು ಅಲ್ಪಸ್ವಲ್ಪ ಗಾಯಗೊಂಡಿದ್ದರು ಎಂದು ತಿಳಿದು ಬಂದಿದೆ.
ಮದ್ಯ ಸೇವನೆಯ ಚಟ ಹೊಂದಿದ್ದ ಚಿದಾನಂದ ಸಂಜೆ ಹಠಾತ್ ಅಸ್ವಸ್ಥಗೊಂಡರು. ಸ್ಥಳೀಯರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಂಗಳವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.