ಮಂಗಳೂರು: ಹಾಡಹಗಲಿನಲ್ಲಿ ವ್ಯಕ್ತಿಯೋರ್ವರನ್ನು ಭೀಕರವಾಗಿ ಹತ್ಯೆ ಮಾಡಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಮುಲ್ಕಿ ತಾಲೂಕಿನ ಪಕ್ಷಿಕೆರೆಯ ಕೆಮ್ರಾಲ್ ನಿವಾಸಿ ಆರೋಪಿ ಮುಹಮ್ಮದ್ ಮುಸ್ತಫಾ ಯಾನೆ ಮುಸ್ತಾ ಎಂದು ತಿಳಿದು ಬಂದಿದೆ.
2020 ನೇ ಸಾಲಿನಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡಹಗಲಿನಲ್ಲಿ ಭೀಕರವಾಗಿ ವ್ಯಕ್ತಿಯೋರ್ವರನ್ನು ಹತ್ಯೆ ಮಾಡಿದ ಪ್ರಕರಣ ಸಂಬಂಧ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ದಾದ ಬಳಿಕ ಆರೋಪಿ ಮುಹಮ್ಮದ್ ಮುಸ್ತಫಾ ನಕಲಿ ಪಾಸ್‌ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಬಳಿಕ 2024 ರ ಎಪ್ರಿಲ್ ತಿಂಗಳಿನಲ್ಲಿ ಆರೋಪಿಯು ಅಕ್ರಮವಾಗಿ ಓಮನ್ ದೇಶದಿಂದ ಭಾರತಕ್ಕೆ ನೇಪಾಳದ ಮೂಲಕ ಅಕ್ರಮವಾಗಿ ಪ್ರವೇಶಿಸಿದ್ದ.
ಇದೀಗ ಪರಾರಿಯಾಗಿದ್ದ ಆರೋಪಿ ಮುಹಮ್ಮದ್ ಮುಸ್ತಫಾನನ್ನು ವಿಶೇಷ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮತ್ತೆ ನ್ಯಾಯಾಂಗ ವಶಕ್ಕೆ ನೀಡಲಾಯಿತು.
2020ರ ಜೂ.5ರಂದು ಮುಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಲ್ಕಿ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವನನ್ನು ಆರೋಪಿಗಳಾದ ದಾವೂದ್ ಹಕೀಂ, ಮುಹಮ್ಮದ್ ಮುಸ್ತಾಫ ಮತ್ತು ಇತರರು ಒಟ್ಟು 10 ಜನ ಸೇರಿ ಕೊಲೆ ಮಾಡಿದ್ದರು. ಎಲ್ಲಾ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ. ಹಾಲಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.
ಈ ಮಧ್ಯೆ ಆರೋಪಿ ಮುಹಮ್ಮದ್ ಮುಸ್ತಫಾ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ 2020ರ ಅಕ್ಟೋಬರ್ 19ರಂದು ಜಾಮೀನು ಪಡೆದಿರುತ್ತಾನೆ. ನಂತರ 2022ರ ಎ.22ರಂದು ನ್ಯಾಯಾಲಯವು ಆರೋಪಿಯ ಜಾಮೀನು ರದ್ದು ಮಾಡಿರುತ್ತದೆ. ಅಂದಿನಿಂದಲೂ ಆರೋಪಿ ಮುಹಮ್ಮದ್ ಮುಸ್ತಫಾನು ತಲೆಮರೆಸಿಕೊಂಡು ನಕಲಿ ಪಾಸ್‌ಪೋರ್ಟ್ ಮೂಲಕ ವಿದೇಶಕ್ಕೆ ಪರಾರಿಯಾಗಿದ್ದನು.
ತಲೆಮರೆಸಿಕೊಂಡ ವಾರಂಟ್ ಆರೋಪಿ ಮುಹಮ್ಮದ್ ಮುಸ್ತಫಾನ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಇದೀಗ ಆರೋಪಿಯನ್ನು ಜೂ.30ರಂದು ಮುಲ್ಕಿಯ ಪಕ್ಷಿಕೆರೆ ಬಳಿ ಪತ್ತೆ ಮಾಡಿ ಮುಂದಿನ ಕ್ರಮದ ಬಗ್ಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ನಕಲಿ ಪಾಸ್‌ಪೋರ್ಟ್ ಪಡೆದು ಓಮನ್ ರಾಷ್ಟ್ರಕ್ಕೆ ಪರಾರಿಯಾಗಿ ನಂತರ ನೇಪಾಳ ಮೂಲಕ ಭಾರತ ದೇಶಕ್ಕೆ ಬಂದಿರುವುದಾಗಿ ತಿಳಿದುಬಂದಿದೆ.