ಮಂಗಳೂರು: ನಗರದ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಪ್ಲಾಟ್ ಫಾರಂ ಸಂಖ್ಯೆ 6 ಮತ್ತು 7ರ ನಡುವೆ ಚಾಲಕನೊಬ್ಬ ಕಾರು ಚಲಾಯಿಸಿ ಮುಖ್ಯದ್ವಾರದ ಮೂಲಕ ಹೊರಗೆ ಬಂದಿರುವ ಘಟನೆ ನಡೆದಿದೆ.
ಕೇರಳ ನೋಂದಣಿಯ ಕಾರು ಆಗಿದ್ದು, ಶಿಮಿಲ್ ಕಾರು ಚಾಲಕ ಎಂದು ತಿಳಿದು ಬಂದಿದೆ.
ಆತ ಬಸ್ ತಂಗುದಾಣದ ಒಳಗೆ ಕಾರು ಚಲಾಯಿಸಿಕೊಂಡು ಬಂದು, ಸಾರ್ವಜನಿಕರು ಕುಳಿತುಕೊಳ್ಳುವ ಮತ್ತು ಬಸ್ಸಿನಿಂದ ಇಳಿದು ಹೋಗುವ ಪ್ಲಾಟ್‌ಫಾರಂ ಮೇಲೆಯೇ ಕಾರು ಹತ್ತಿಸಿ ಹೊರಗೆ ಹೋಗಿದ್ದಾನೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಪ್ರಯಾಣಿಕರೊಬ್ಬರನ್ನು ಬಿಡಲು ಬಂದಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಏಕಾಏಕಿ ಮುಖ್ಯದ್ವಾರದ ಒಳಗೆ ನುಗ್ಗಿದೆ. ಬೇರೆ ದಾರಿ ಕಾಣದೆ ಚಾಲಕ ಪ್ರಯಾಣಿಕರು ಸಾಗುವ ದಾರಿಯ ಮೂಲಕವೇ ಕಾರನ್ನು ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಕುರಿತು ಮಂಗಳೂರು ನಗರ ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.