ಮಂಗಳೂರು: ಗುರುವಾರ ರಾಷ್ಟ್ರೀಯ ಹೆದ್ದಾರಿ 66 ರ ಪಾವಂಜೆ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಬಂಗ್ರಕುಳೂರು ನಿವಾಸಿ ಶ್ರುತಿ ಆಚಾರ್ಯ (27) ಎಂದು ಗುರುತಿಸಲಾಗಿದ್ದು, ಅವರ ಜೊತೆಗಿದ್ದ ಅವರ ತಂದೆ ಗೋಪಾಲ್ ಆಚಾರ್ಯ (53) ಮತ್ತು ಪಕ್ಕದಲ್ಲಿದ್ದ ಮಹಿಳೆ ಕೈರುನ್ನಿಸಾ (52) ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರುತಿ ಮತ್ತು ಆಕೆಯ ತಂದೆ ರೈನ್‌ಕೋಟ್ ಧರಿಸಲು ರಸ್ತೆಬದಿಯಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ, ಉಡುಪಿಯಿಂದ ಮಂಗಳೂರು ಕಡೆಗೆ ವೇಗವಾಗಿ ಬರುತ್ತಿದ್ದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಶ್ರುತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಬದುಕುಲಿಯಲಿಲ್ಲ ಎಂದು ತಿಳಿದು ಬಂದಿದೆ.
ಚೆನ್ನೈನಲ್ಲಿ ನೆಲೆಸಿರುವ ಸಾಫ್ಟ್‌ವೇರ್ ಇಂಜಿನಿಯರ್ ಶ್ರುತಿ, ಸುಮಾರು 15 ದಿನಗಳ ಹಿಂದೆ ನಿಧನರಾದ ತನ್ನ ಸಹೋದರನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇತ್ತೀಚೆಗೆ ಮನೆಗೆ ಮರಳಿದ್ದರು. ಅಪಘಾತ ನಡೆದ ದಿನ, ಅವರು ಕಿನ್ನಿಗೋಲಿಯ ಬ್ಯಾಂಕ್‌ಗೆ ಭೇಟಿ ನೀಡಿ ತನ್ನ ತಂದೆಯೊಂದಿಗೆ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.