ಮಂಗಳೂರು: ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಆಸ್ಪತ್ರೆಯ ಯುವ ಫಿಸಿಯೋಥೆರಪಿ ವೈದ್ಯರೊಬ್ಬರು ಸ್ಥಳದಲ್ಲೇ ಮೃತಪಟ್ಟ ನಂತೂರಿನ ತಾರೆತೋಟ ಬಳಿ ನಡೆದಿದೆ.
ಮೃತರನ್ನು ಕೇರಳದ ಆಲಪ್ಪುಳ ಮೂಲದ ಡಾ. ಮುಹಮ್ಮದ್ ಅಮಲ್ (29) ಎಂದು ಗುರುತಿಸಲಾಗಿದೆ.
ಅವರು ಇತ್ತೀಚೆಗೆ ತಮ್ಮ ಫಿಸಿಯೋಥೆರಪಿ ಪದವಿಯನ್ನು ಪೂರ್ಣಗೊಳಿಸಿ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ಸೇರಿದ್ದರು ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ, ಕೇರಳ ಮೂಲದ ಸ್ನೇಹಿತೆಯೊಂದಿಗೆ ತನ್ನ ಸಿಯಾಜ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನಂತೂರಿನಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದಾಗ, ಅಮಲ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಬಳಿ ಅತಿ ವೇಗ ಮತ್ತು ರಸ್ತೆ ಸ್ಕಿಡ್ ಆದ ಕಾರಣ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಕಾರು ಸ್ಕಿಡ್ ಆಗಿ, ಡಿವೈಡರ್‌ಗೆ ಡಿಕ್ಕಿ ಹೊಡೆದು, ಗ್ರಿಲ್‌ಗಳಿಗೆ ಡಿಕ್ಕಿ ಹೊಡೆದು ಎರಡು ಮೂರು ಬಾರಿ ಪಲ್ಟಿಯಾಗಿ ರಸ್ತೆಗೆ ಇಳಿದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಅಮಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ವೇಳೆ ಹಿಂದಿನಿಂದ ಬರುತ್ತಿದ್ದ ಲೋಡ್ ತುಂಬಿದ್ದ ಲಾರಿಯೊಂರ ಚಾಲಕ ಹಠಾತ್ ಬ್ರಾಕ್ ಹಾಕಿದ ಕಾರಣ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲೇ ಪಲ್ಟಿಯಾಗಿದೆ. ಇದರಿಂದಾಗಿ ನಂತೂರು-ಪಂಪ್‌ವೆಲ್ ಮಾರ್ಗದಲ್ಲಿ ರಾತ್ರಿಯಿಡೀ ಸ್ವಲ್ಪ ಸಮಯದವರೆಗೆ ಟ್ರಾಫಿಕ್ ಜಾಮ್ ಉಂಟಾಯಿತು.
ಅಮಲ್ ಅವರೊಂದಿಗೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.