ವಿಟ್ಲ: ಜುಗಾರಿ ಅಡ್ಡೆಗೆ ದಾಳಿ ಪ್ರಕರಣದಲ್ಲಿ ಆರೋಪಿಯೋರ್ವನ ಬಳಿ ಹಣದ ಬೇಡಿಕೆ ಇಟ್ಟ ಆರೋಪದಲ್ಲಿ ವಿಟ್ಲ ಠಾಣಾ ಪಿಎಸ್‌ಐ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಕಳೆದ ಮೇ 8 ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜುಗಾರಿ ಆಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ, ವಿಟ್ಲ ಪೊಲೀಸ್ ಠಾಣೆಯ ಪಿಎಸ್‌ಐ ಕೌಶಿಕ್ ಬಿ.ಸಿ ದಾಳಿ ನಡೆಸಿದ್ದರು. ಈ ಸಂದರ್ಭ ಜುಗಾರಿ ಆಟ ಆಡುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿ ದ್ವಿಚಕ್ರ ವಾಹನವೊಂದು ಪತ್ತೆಯಾಗಿತ್ತು.
ಪ್ರಕರಣ ಸಂಬಂಧ ಪಿಎಸ್‌ಐ ಕೌಶಿಕ್ ಬಿ.ಸಿ ಅವರು ಕಾನೂನಾತ್ಮಕ ಕ್ರಮ ಜರುಗಿಸದೇ ಸ್ಥಳದಲ್ಲಿ ಪತ್ತೆಯಾಗಿದ್ದ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿದ್ದಾರೆ. ಬಳಿಕ ಆ ಬೈಕ್ ಮಾಲಕನಿಗೆ ಮೂರನೇ ವ್ಯಕ್ತಿಯೊಬ್ಬನ ಮೂಲಕ ಪ್ರಕರಣ ಸಂಬಂಧ ಹಣದ ಬೇಡಿಕೆಯಿಟ್ಟಿರುವ ಸಂಭಾಷಣೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನಲೆ ಪಿಎಸ್‌ಐ ಕೌಶಿಕ್ ಬಿ.ಸಿ ಅವರನ್ನು ಮೇ 12ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.