ಮಂಗಳೂರು: ಕೇರಳದ ಕೋಝಿಕ್ಕೋಡ್ ಬೇಪೂರ್ ಸಮೀಪ ಸಿಂಗಾಪುರದ ಕಂಟೈನರ್ ಹಡಗು ಎಂ.ವಿ ವಾನ್ ಹಾಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಇನ್ನುಳಿದ 18 ಮಂದಿಯನ್ನು ರಕ್ಷಿಸಿಸಲಾಗಿದ್ದು, ಅವರನ್ನು ಹೊತ್ತ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಆಗಮಿಸಿದೆ.
ಎಂ.ವಿ. ವಾನ್ ಹಾಯ್ 503 ಹಡಗು ಕೊಲೊಂಬೋದಿಂದ ಮುಂಬೈಯ ನ್ಹಾವಾ ಶೇವಾ ಕಂಟೈನರ್ ಟರ್ಮಿನಲ್‌ಗೆ ಪ್ರಯಾಣಿಸುತ್ತಿತ್ತು. ಆದರೆ ಜೂ.9 ರಂದು ಕೇರಳದ ಬೇಪೂರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲುಗಳ ದೂರದಲ್ಲಿ ಈ ಹಡಗು ಸಾಗುವ ವೇಳೆ ಸ್ಫೋಟ ಉಂಟಾಗಿತ್ತು. ತಕ್ಷಣ ಭಾರತೀಯ ನೌಕಾಪಡೆಗೆ ಮಾಹಿತಿಯನ್ನು ರವಾನಿಸಲಾಯಿತು.
ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ ಭಾರತೀಯ ನೌಕಾಪಡೆಯ ಐಎನ್‌ಎಸ್ ಸೂರತ್ ಹಡಗು ಹಾಗೂ ಕೋಸ್ಟ್ ಗಾರ್ಡ್ ನ ಮೂರು ನೌಕೆಗಳು ಹಡಗಿನಲ್ಲಿದ್ದ 22 ಸಿಬ್ಬಂದಿಯಲ್ಲಿ 18 ಜನರನ್ನು ರಕ್ಷಣೆ ಮಾಡಿದೆ ಎಂದು ತಿಳಿದು ಬಂದಿದೆ.
ಲೂಯನ್ಲಿ ಮತ್ತು ಸೋನಿಟೂರ್ ಹೆನಿ ಎಂಬ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕ್ಸೂ ಪಬೋ, ಗೋ ಲಿನಿಂಗ್, ಥೆನ್ ಥಾನ್ ತ್ವಾಯ್, ಮತ್ತು ಕಿ ಜಾವ್ ತ್ವೂ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಹನ್ನೆರಡು ಜನರು ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಅವರನ್ನು ಮಂಗಳೂರಿನ ಹೋಟೆಲ್‌ಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವೀ ಚುನ್-ಜು, ಟ್ಯಾಗ್ ಪೆಂಗ್, ಕಾನ್ ಹಿಯು ವಾಲ್, ಲಿನ್, ಚುನ್ ಚೆಂಗ್, ಫೆಂಗ್ ಲಿ, ಲಿ ಫೆಂಗ್‌ಗುವಾಂಗ್, ಥೆಟ್ ಹ್ತುಟ್ ಸ್ವೆ, ಗುವೋ ಎರ್ಚುನ್, ಹೋಲಿಕ್ ಅಸಿಯಾರಿ, ಸು ವೀ, ಚಾಂಗ್ ರೆನ್-ಹಾನ್, ಮತ್ತು ವು ವೆನ್-ಚಿ ಎಂಬುವವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಯು ಬೊ ಫಾಂಗ್, ಸಾನ್ ವಿನ್, ಜಾನಲ್ ಅಹಿದಿನ್, ಮತ್ತು ಸಿಹ್ ಚಾಯ್ ವೆನ್ ನಾಪತ್ತೆಯಾದವರೆಂದು ಗುರುತಿಸಲಾಗಿದೆ.
22 ಜನರ ಸಿಬ್ಬಂದಿಯಲ್ಲಿ 8 ಮಂದಿ ಚೀನಾದವರು, 4 ಮಂದಿ ತೈವಾನಿಗಳು, 4 ಮಂದಿ ಮ್ಯಾನ್ಮರ್‌ನವರು ಮತ್ತು 2 ಮಂದಿ ಇಂಡೋನೇಷ್ಯಾದವರು ಎನ್ನಲಾಗಿದೆ.
ಬಂದರು ಅಧಿಕಾರಿಗಳು, ಸ್ಥಳೀಯ ಪೊಲೀಸರೊಂದಿಗೆ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ನೆರವು ನೀಡುತ್ತಿದ್ದಾರೆ. ಇನ್ನು ನಾಪತ್ತೆಯಾದ ಸಿಬ್ಬಂದಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.