ಮಂಗಳೂರು: ಬೃಹತ್ ಗುಂಡಿಗಳಿಂದ ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕಂಕನಾಡಿ ಬೆಂದೂರ್ ವೆಲ್ ವರೆಗಿನ ಮುಖ್ಯ ರಸ್ತೆ ದುರಸ್ಥಿಗೆ ಒತ್ತಾಯಿಸಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ನೇತೃತ್ವದಲ್ಲಿ ಕಂಕನಾಡಿ ಕರಾವಳಿ ವೃತ್ತದ ಬಳಿ ಪ್ರತಿಭಟನೆ ನಡೆಯಿತು
ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಜ್ ಅವರು ಸ್ಮಾರ್ಟ್ ಸಿಟಿ ಯೋಜನೆ ಹೆಸರಿನಲ್ಲಿ ಬಂದಿರುವ ಸಾವಿರಾರು ಕೋಟಿ ಹಣ ವ್ಯರ್ಥವಾಗಿದೆ ನಗರ ಪ್ರವೇಶ ಮಾಡುವ ಮುಖ್ಯ ರಸ್ತೆಯನ್ನೇ ನಿರ್ಲಕ್ಷ್ಯ ಮಾಡಲಾಗಿದೆ. ದಿನನಿತ್ಯ ರಸ್ತೆ ಗುಂಡಿಗಳಿಗೆ ಬಿದ್ದು ಸಾವು ನೋವುಗಳು ಸಂಭವಿಸುತ್ತಿದೆ ರಸ್ತೆ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿದರೆ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ಜನಪ್ರತಿನಿದಿಗಳು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಮಾತನಾಡಿದ ಡಿವೈಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಮಾಧುರಿ ಬೋಳಾರ ಅವರು, ರಸ್ತೆ ಗುಂಡಿಗಳಿಂದಾಗಿ ನಗರದಲ್ಲಿ ದಿನನಿತ್ಯ ಟ್ರಾಫಿಕ್ ಜಾಮ್ ಆಗುತ್ತಿದೆ ನಗರದಿಂದ ಹೆದ್ದಾರಿ ತಲುಪಬೇಕಾದರೆ ಒಂದು ಗಂಟೆ ವಿಳಂಬ ಆಗುತ್ತಿದೆ ಇದರಿಂದ ನಗರಕ್ಕೆ ಕೆಲಸಕ್ಕೆ ಬರುವ ಯುವತಿಯರು ಮತ್ತು ಮಹಿಳೆಯರು ಮನೆಗೆ ತಲುಪಬೇಕಾದರೆ ರಾತ್ರಿಯಾಗುತ್ತಿದೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ವ್ಯರ್ಥ ಆಗುವ ಸಮಯಕ್ಕೆ ಹೊಣೆ ಯಾರು ಎಂದು ಅವರು ಪ್ರಶ್ನಿಸಿದರು.
ಸಿಪಿಐಮ್ ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಡಿವೈಎಫ್ಐ ನಗರಾಧ್ಯಕ್ಷ ಜಗದೀಶ್ ನಾರಾಯಣ್ ಬಜಾಲ್, ಜಿಲ್ಲಾ ಮುಖಂಡರಾದ ತಯ್ಯುಬ್ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಡಿವೈಎಫ್ಐ ಮುಖಂಡರಾದ ರಿಜ್ವಾನ್ ಖಂಡಿಗ, ಪುನೀತ್ ಉರ್ವಸ್ಟೋರ್, ವರ ಪ್ರಸಾದ್ ಬಜಾಲ್, ಕೃಷ್ಣ ಬಜಾಲ್, ಪ್ರವೀಣ್ ಕೊಂಚಾಡಿ, ಆನಂದ ಎನೇಲ್ಮಾರ್, ಕಟ್ಟಡ ಕಾರ್ಮಿಕರ ಸಂಘಟನೆ ಮುಖಂಡರಾದ ಮನೋಜ್ ಕುಲಾಲ್, ಲೋಕೇಶ್ ಎಂ., ರಿಕ್ಷಾ ಚಾಲಕರ ಸಂಘದ ಮುಖಂಡರಾದ ಅನ್ಸರ್ ಬಜಾಲ್, ಇಕ್ಬಾಲ್ ಉರ್ವಸ್ಟೋರ್, ಜನವಾದಿ ಮಹಿಳಾ ಸಂಘದ ಮುಖಂಡರಾದ ಅಸುಂತ ಡಿಸೋಜ, ಯೋಗೀತಾ ಸುವರ್ಣ ಮುಂತಾದವರು ಉಪಸ್ಥಿತರಿದ್ದರು. ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ ಸ್ವಾಗತಿಸಿ, ವಂದಿಸಿದರು.