ಉತ್ತರಪ್ರದೇಶ: ಪತಿ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ತಾಯಿ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ವರದಿಯಾಗಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಮನಿಷಾ (28) ಎಂದು ಗುರುತಿಸಲಾಗಿದೆ.
ಮನೀಷಾ 2023 ರಲ್ಲಿ ನೋಯ್ಡಾ ನಿವಾಸಿ ಕುಂದನ್ ಅವರನ್ನು ವಿವಾಹವಾದರು, ಮದುವೆಯನ್ನು 20ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ನೆರವೇರಿಸಿತು. ಜೊತೆಗೆ ವರದಕ್ಷಿಣೆಯಾಗಿ ಬುಲೆಟ್ ಬೈಕನ್ನೂ ನೀಡಿದ್ದರು. ಆದರೆ ಮದುವೆಯಾದ ಕೆಲ ತಿಂಗಳಲ್ಲೇ ಪತಿ ಮನೆಯಿಂದ ವರದಕ್ಷಿಣೆಗಾಗಿ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆರಂಭದಲ್ಲಿ ಇದೆಲ್ಲವನ್ನೂ ಮನಿಷಾ ಸಹಿಸಿಕೊಂಡಿದ್ದರು. ಆದರೆ ದಿನ ಕಳೆದಂತೆ ಅತ್ತೆ, ಮಾವನ ಕಿರಿ ಕಿರಿ ಹೆಚ್ಚಾಗತೊಡಗಿತು, ಅಲ್ಲದೆ ಪತಿಗೆ ಕಾರು ಜೊತೆಗೆ ಇನ್ನೂ ಹೆಚ್ಚಿನ ಹಣ ನೀಡುವಂತೆ ಕಿರುಕುಳ ನೀಡಲು ಆರಂಭಿಸಿದರು. ಇದಕ್ಕೆ ಮಣಿಯದಿದ್ದಾಗ ಪತಿ ಮತ್ತು ಅತ್ತೆ ಸೇರಿ ವಿದ್ಯುತ್ ಶಾಕ್ ನೀಡಿ ಕೊಲ್ಲುವ ಯತ್ನ ಮಾಡಿದ್ದಾರೆ. ಇದರಿಂದ ಭಯಗೊಂಡ ಮನಿಷಾ ಪತಿ ಮನೆಯಿಂದ ತಾಯಿ ಮನೆಗೆ ಬಂದು ನೆಲೆಸಿದ್ದಾಳೆ.
ಮನಿಷಾ ತನ್ನ ತಾಯಿ ಮನೆಯಲ್ಲಿ ವಾಸವಾಗಿರುವ ಸಮಯದಲ್ಲಿ ಪತಿ, ಅತ್ತೆ ಮಾವ ಸೇರಿಕೊಂಡು ಮನಿಷಾಳಿಗೆ ವಿಚ್ಛೇದನ ನೀಡುವ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಮನಿಷಾ ಬಳಿಯೂ ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಮನಿಷಾ ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ನೀಡಿದ ಹಣ ವಸ್ತುಗಳನ್ನು ಹಿಂದಿರುಗಿಸುವವರೆಗೂ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವುದಿಲ್ಲ ಎಂದು ಹೇಳಿದ್ದಾಳೆ ಎಂದು ವರದಿ ತಿಳಿಸಿದೆ.
ಮಂಗಳವಾರ ರಾತ್ರಿ ಮನಿಷಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೂ ಮೊದಲು ಮನಿಷಾ ತನ್ನ ಸಾವಿಗೆ ಪತಿ ಹಾಗೂ ಆತನ ಮನೆಯವರೇ ನೇರ ಕಾರಣ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಕೈ, ಕಾಲು, ಹೊಟ್ಟೆಯ ಮೇಲೆ ಪೆನ್ನಿನಿಂದ ಬರೆದುಕೊಂಡಿದ್ದಳು ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.
ಮನೀಷಾ ತನ್ನ ಸಾವಿಗೆ ತನ್ನ ಅತ್ತೆ ಮಾವಂದಿರನ್ನು ದೂಷಿಸುವ ವೀಡಿಯೊವನ್ನು ಸಹ ಮಾಡಿದ್ದಾರೆ. ಪೊಲೀಸರಿಗೆ ಲಭ್ಯವಾದ ಕ್ಲಿಪ್‌ನಲ್ಲಿ ಮನೀಷಾ ಅಳುತ್ತಾ ತನ್ನ ಗಂಡ, ಅವನ ತಾಯಿ, ತಂದೆ ಮತ್ತು ಸಹೋದರ ವರದಕ್ಷಿಣೆಗಾಗಿ ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ವಿವರಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮನಿಷಾ ಹೆತ್ತವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.