ಮಡಿಕೇರಿ: ಕೊಡಗು-ಕೇರಳ ಗಡಿಯ ಮಜ್ಞಡ್ಕದಲ್ಲಿ ಮುಳುಗಿದ ಸೇತುವೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಜೆಸಿಬಿ ಆಪರೇಟರ್ ಒಬ್ಬರು ನಿಯಂತ್ರಣ ಕಳೆದುಕೊಂಡು ತುಂಬಿ ಹರಿಯುತ್ತಿದ್ದ ಕರಿಕೆ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.
ನಾಪತ್ತೆಯಾದವರು ಬೆಳಗಾವಿ ಮೂಲದ ಅನಿಲ್ (20) ಎಂದು ತಿಳಿದು ಬಂದಿದೆ.
ಮಜ್ಞಡ್ಕ ಗ್ರಾಮದಲ್ಲಿ ಕೇರಳಕ್ಕೆ ಸೇರಿದ ಗೇರು ತೋಟದ ಕಾಮಗಾರಿಯಲ್ಲಿ ತೊಡಗಿದ್ದ ಅನಿಲ್ ಜು. 17ರಂದು ಮಧ್ಯಾಹ್ನ ಕರಿಕೆಯ ತೋಟಂ ಗ್ರಾಮದ ಮನೆಯಿಂದ ತಮಗೆ ಹಾಗೂ ಕೆಲಸಗಾರರಿಗೆ ಊಟ ತರಲೆಂದು ಬೈಕ್‌ನಲ್ಲಿ ಬರುತ್ತಿದ್ದರು. ಈ ಸಂದರ್ಭ ಮಜ್ಞಡ್ಕ ಮುಳುಗು ಸೇತುವೆಯಲ್ಲಿ ನಿಯಂತ್ರಣ ಕಳೆದುಕೊಂಡು ಬೈಕ್ ಸಹಿತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ವಿಷಯ ತಿಳಿದ ಕೇರಳ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು.
ಕರಿಕೆಯ ಸಾಮಾಜಿಕ ಕಾರ್ಯಕರ್ತರಾದ ಶಿವಗಿರಿ ರಾಜೇಶ್, ವಿನೋದ್ ಕುಮಾರ್ ಹಾಗೂ ಕಿಶನ್ ಅವರುಗಳು ಕರಿಕೆ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಿದರು. ಆದರೆ ಅನಿಲ್ ಶುಕ್ರವಾರ ಸಂಜೆಯವರೆಗೆ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ನಿರಂತರ ಮಳೆಯಿಂದ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದ ಪರಿಣಾಮ ಈ ಘಟನೆ ಸಂಭವಿಸಿರಬಹುದು ಎನ್ನಲಾಗಿದೆ.