ಉಳ್ಳಾಲ: ಭಾರೀ ಮಳೆಗೆ ಪಿಲಾರು ಬಳಿ ಹೊಳೆ ದಾಟುವ ಸಂದರ್ಭ ಕಾಲುಸಂಕದಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನ ಮೃತದೇಹ ಶುಕ್ರವಾರ ಸೋಮೇಶ್ವರ ಉಚ್ಚಿಲದ ಹೊಳೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತ ವ್ಯಕ್ತಿ ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲನಿಯ ನಿವಾಸಿ ಕೇಶವ ಶೆಟ್ಟಿ (64) ಎಂದು ತಿಳಿದು ಬಂದಿದೆ.
ಜು. 17ರಂದು ಬುಧವಾರ ಸಂಜೆ 7 ಗಂಟೆ ವೇಳೆಗೆ ಕೇಶವ ಅವರು ಕೆಲಸ ಮುಗಿಸಿ ಪಿಲಾರು ರಸ್ತೆಯಾಗಿ ಮನೆಗೆ ಮರಳುತ್ತಿದ್ದಾಗ ಪಿಲಾರುವಿನ ರಾಜಕಾಲುವೆಯ ಕಾಲುಸಂಕ ದಾಟುತ್ತಿದ್ದ ವೇಳೆ ನೀರುಪಾಲಾಗಿದ್ದರು ಎಂದು ತಿಳಿದು ಬಂದಿದೆ.
ಮನೆಮಂದಿ, ನೆರೆಹೊರೆಯವರು ಸೇರಿ ಕಾಲುವೆಯುದ್ದಕ್ಕೂ ಸಾಕಷ್ಟು ಹುಡುಕಾಟ ನಡೆಸಿದ್ದರೂ, ಕೇಶವ ಅವರು ಸಿಕ್ಕಿರಲಿಲ್ಲ. ಅವರ ಛತ್ರಿಯು ಕಾಲುವೆಯಲ್ಲಿ ಪತ್ತೆಯಾಗಿತ್ತು. ಮನೆಮಂದಿ ಗುರುವಾರ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಶುಕ್ರವಾರ ಮದ್ಯಾಹ್ನ ಉಚ್ಚಿಲದ ಹೊಳೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್ ಮತ್ತು ಸೋಮೇಶ್ವರ ಮುಖ್ಯಾಧಿಕಾರಿ ಮತ್ತಡಿ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
ಪೊಲೀಸರು, ಹಾಗೂ ಅಗಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಹೊಳೆಯಿಂದ ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ.