ಮಂಗಳೂರು: ಹೆಬ್ಬಾವು ಮಾರಾಟ ಜಾಲವೊಂದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಅಧಿಕಾರಿಗಳು ಅಪ್ರಾಪ್ತ ಬಾಲಕ ಸಹಿತ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರು ಮಂಗಳೂರಿನ ಬಡಗ ಉಳಿಪ್ಪಾಡಿ ನಿವಾಸಿ ವಿಹಾಲ್ ಎಚ್. ಶೆಟ್ಟಿ (18), ಸ್ಟೇಟ್‌ಬ್ಯಾಂಕ್ ಬಳಿಯ ಸಾಕುಪ್ರಾಣಿ ಅಂಗಡಿ ಮಾಲಕ ಉಳ್ಳಾಲ ಮುನ್ನೂರು ಗ್ರಾಮದ ಇಬ್ರಾಹೀಂ ಶಕೀಲ್ ಇಸ್ಮಾಯಿಲ್ (35), ಅಂಗಡಿ ಸಿಬ್ಬಂದಿ ಉಳ್ಳಾಲ ಹರೇಕಳ ಗ್ರಾಮದ ಮುಹಮ್ಮದ್ ಮುಸ್ತಫಾ (22) ಮತ್ತು ಮಂಗಳೂರಿನ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ 16 ವರ್ಷದ ಬಾಲಕ ಎಂದು ತಿಳಿದು ಬಂದಿದೆ.
ಮಂಗಳೂರು ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬಂದಿ ಕಾರ್ಯಾಚರಣೆ ನಡೆಸಿದರು. ಮೊದಲಿಗೆ ಇಬ್ಬರನ್ನು ಹೆಬ್ಬಾವು ಖರೀದಿಸುವ ನೆಪದಲ್ಲಿ ವಿಹಾಲ್‌ನನ್ನು ಸಂಪರ್ಕಿಸಿದರು. ನಗರದ ಕದ್ರಿಯ ಅಶ್ವತ್ಥ ಕಟ್ಟೆಯ ಬಳಿ ಈ ಕುರಿತು ಆತನೊಂದಿಗೆ ಮಾತುಕತೆ ನಡೆಸಿದ್ದಾರೆ.
ಆ ಬಳಿಕ ಆತ ಹಾವನ್ನು ತೋರಿಸಿ 45,000 ರೂ. ಮೊತ್ತಕ್ಕೆ ವ್ಯವಹಾರ ಕುದುರಿಸಿದನು. ಈ ಸಂದರ್ಭ ಆತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಇದರಿಂದ ಭಯಗೊಂಡ ಆತ ಹಾವು ನನ್ನದಲ್ಲ ಎಂದು ಅಪ್ರಾಪ್ತ ಬಾಲಕ ಅದನ್ನು ಮಾರಾಟ ಮಾಡಲು ನೀಡಿದ್ದಾನೆ ಎಂದು ಹೇಳಿದ್ದಾನೆ. ಬಳಿಕ ಆತನ ಮೂಲಕವೇ ಬಾಲಕನಿಗೆ ಕರೆ ಮಾಡಿಸಿ ಮಾಲ್‌ವೊಂದರ ಬಳಿ ಆತನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಟೇಟ್‌ಬ್ಯಾಂಕ್‌ನಲ್ಲಿರುವ ಸಾಕು ಪ್ರಾಣಿ ಮಾರಾಟ ಅಂಗಡಿಯಲ್ಲೂ ಹಾವು ಮಾರಾಟ ನಡೆಯುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಇದೇ ಸಂದರ್ಭ ಗ್ರಾಹಕರ ಸೋಗಿನಲ್ಲಿ ಓರ್ವ ಯುವಕನನ್ನು ಅಲ್ಲಿಗೆ ಕಳುಹಿಸಲಾಯಿತು. ಆಗ ಅಲ್ಲಿನ ಸಿಬ್ಬಂದಿ ತಮ್ಮಲ್ಲಿ ಹಾವಿದೆ ತರಿಸಿ ಕೊಡುತ್ತೇವೆ ಎಂದು ವಿಹಾಲ್‌ಗೆ ಕರೆ ಮಾಡಿದರು. ಕೂಡಲೇ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಾಲಕ ಹಾಗೂ ಸಿಬ್ಬಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಂಗಡಿಯಲ್ಲಿ ನಕ್ಷತ್ರ ಆಮೆಗಳೂ ಸಿಕ್ಕಿದ್ದು, ಅವುಗಳನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ವನ್ಯ ಜೀವಿ ಸಂರಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಇದನ್ನು ಕೆಲವರು ಮನೆಯಲ್ಲಿ ಸಾಕುವ ಉದ್ದೇಶದಿಂದ ಖರೀದಿಸುತ್ತಿದ್ದರು. ಈ ಜಾಲಕ್ಕೆ ತಮಿಳುನಾಡು ವರೆಗೆ ಸಂಪರ್ಕವಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.