ಬೆಂಗಳೂರು: ಮಾದಕವಸ್ತು ಕಳ್ಳಸಾಗಾಟದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರು ವಿಭಾಗದ ಎನ್‌ಸಿಬಿ ಅಧಿಕಾರಿಗಳು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 9 ಕೆ.ಜಿ ಮೆಥಾಂಫಿಟಾಮೈನ್ ಎಂಬ ಮಾದಕವಸ್ತುವನ್ನು ಎನ್‌ಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಪ್ರಕರಣದಲ್ಲಿ ದೆಹಲಿಯಿಂದ ತರಲಾಗಿದ್ದ 7 ಕೆ.ಜಿ. ಮೆಥಾಂಫಟಾಮೈನ್ ಅನ್ನು ವಶಪಡಿಸಿಕೊಂಡು ಅದನ್ನು ಸಾಗಿಸುತ್ತಿದ್ದ ಆಫ್ರಿಕನ್ ಮೂಲದ ಮಹಿಳೆಯನ್ನು ಬಂಧಿಸಲಾಯಿತು. ಈಕೆ, ಮುಂಬೈನಿಂದ ಬೆಂಗಳೂರಿಗೆ ಬಸ್ ಮೂಲಕ ಮಾದಕವಸ್ತು ಸಾಗಿಸುತ್ತಿದ್ದಳು. ಆಕೆ ಯಾರಿಗೂ ಅನುಮಾನ ಬರದಂತೆ ಮಗುವಿನೊಂದಿಗೆ ಅವಳು ಪ್ರಯಾಣಿಸುತ್ತಿದ್ದಳು. ಕಳ್ಳಸಾಗಣೆಗೆ ವ್ಯವಸ್ಥೆ ಮಾಡಿದ್ದ ಮತ್ತೂಬ್ಬ ಮಹಿಳಾ ಆಫ್ರಿಕ ಪ್ರಜೆಯನ್ನು ಸಹ ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಆಫ್ರಿಕನ್ ಮೂಲದ ಪ್ರಜೆಯನ್ನು ಬಂಧಿಸಿ 2 ಕೆ.ಜಿ. ಮೆಥಾಂಫಿಟಾಮೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಿಂದ ಮಾದಕ ವಸ್ತುವನ್ನು ತರಿಸಿ, ಪಶ್ಚಿಮ ದೆಹಲಿಯ ಒಂದು ಸ್ಥಳದಲ್ಲಿ ಪ್ಯಾಕ್ ಮಾಡಿ, ಲಗೇಜ್ ಬ್ಯಾಗ್‌ನಲ್ಲಿ ಮರೆ ಮಾಚಿ ಅದನ್ನು ದೇಶೀಯ ವಿಮಾನದ ಮೂಲಕ ಬೆಂಗಳೂರಿಗೆ ಸಾಗಿಸಲು ಯತ್ನಿಸಲಾಗಿತ್ತು. ವಿದ್ಯಾರ್ಥಿ ಅಥವಾ ಪ್ರವಾಸಿ ವೀಸಾದಲ್ಲಿ ಆಕೆ ಭಾರತಕ್ಕೆ ಪ್ರವೇಶಿಸಿದ್ದಳು ಎಂದು ತನಿಖೆಯಿಂದ ತಿಳಿದುಬಂದಿದೆ. ಆದರೆ ಅದರ ಅವಧಿ ಮುಗಿದ ನಂತರ ತನ್ನ ದೇಶಕ್ಕೆ ವಾಪಸ್ ಹೋಗದೆ, ದೇಶದಲ್ಲೇ ಅಕ್ರಮವಾಗಿ ವಾಸವಾಗಿದ್ದಾಳೆ. ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಬೇರೆ ದೇಶದ ನಕಲಿ ಪಾಸ್‌ಪೋರ್ಟ್ ಪಡೆದು ಕೊಂಡಿದ್ದಳು ಎಂದು ಎನ್‌ಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.