ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂಡಬಿದಿರೆ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನೊಬ್ಬನನ್ನು ಬೆಂಗಳೂರಿನಲ್ಲಿ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯೋಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.
ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿಕೊಂಡು ನಂತರ ಬ್ಲಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಾರತಹಳ್ಳಿ ಪೊಲೀಸರಿಗೆ ಸಂತ್ರಸ್ತೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಫಿಸಿಕ್ಸ್ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜೊತೆ ಹತ್ತಿರವಾಗಿದ್ದ ಬಳಿಕ ಹಂತ ಹಂತವಾಗಿ ಚಾಟ್ ಮಾಡುವುದು, ನೋಟ್ಸ್ ನೀಡುವುದು ಮಾಡುತ್ತಿದ್ದ ಎಂದು ಹೇಳಲಾಗಿದೆ.
ಬಳಿಕ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಉಪನ್ಯಾಸಕ, ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು, ನೋಟ್ಸ್ ನೀಡುವುದನ್ನು ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಲ್ಲದೇ, ಈ ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಉಪನ್ಯಾಸಕ ನರೇಂದ್ರ ಕೃತ್ಯ ಎಸಗಿದ ಬಳಿಕ ಬಯಾಲಜಿ ಉಪನ್ಯಾಸಕ ಸಂದೀಪ್ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಆಗ, ‘ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವೀಡಿಯೊ ತನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವೆ’ ಎಂದು ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ಎಂದು ಹೇಳಲಾಗಿದೆ.
ವಿದ್ಯಾರ್ಥಿನಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ ರೂಮ್ ಅನೂಪ್ ಎಂಬಾತನದ್ದಾಗಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ರೂಮ್‌ಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್‌ನಲ್ಲಿ ಸಿಸಿಟಿವಿ ಇದೆ’ ಎಂದು ಬೆದರಿಕೆ ಹಾಕಿದ್ದ ಬಳಿಕ ಆತನಿಂದಲೂ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಉಪನ್ಯಾಸಕರನ್ನು ಎದುರಿಸಲು ಸಾಧ್ಯವಾಗದೆ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಸಮಸ್ಯೆ ಹೆಚ್ಚಾಗಲು ಆರಂಭವಾದಾಗ ಕೃತ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡಿ ಪೊಲೀಸರಿಗೆ ದೂರು ಕೊಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.