ಮಂಗಳೂರು: ವ್ಯವಹಾರ ಉದ್ದೇಶಕ್ಕೆ ಕೇರಳದ ನಾಲ್ವರನ್ನು ಮಂಗಳೂರಿಗೆ ಕರೆಸಿಕೊಂಡು ಬಳಿಕ ಹೊರ ವಲಯದ ಮಲ್ಲೂರಿಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ನಗದು, ದಾಖಲೆಗಳನ್ನು ದೋಚಿರುವ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವರು ಕೋಝಿಕ್ಕೋಡ್ ನಿವಾಸಿ ಅಬ್ದುಲ್ ಮನಾಫ್ ಹಾಗೂ ಅವರ ಸ್ನೇಹಿತರಾದ ಅರ್ಶಕ್ ಅಹಮ್ಮದ್, ಯಾಸರ್ ಅರಾಫತ್ ವಿ.ಪಿ. ಹಾಗೂ ಮುಹಮ್ಮದ್ ಸಾಹಿರ್ ಎಂದು ತಿಳಿದು ಬಂದಿದೆ.
ದುಬೈಯಲ್ಲಿ ವ್ಯವಹಾರ ಮತ್ತು ಲ್ಯಾಂಡ್ ಬೋಕರಿಂಗ್ ಕೆಲಸ ಮಾಡುತ್ತಿದ್ದ ಮನಾಫ್ ಹಾಗೂ ಅವರ ಸ್ನೇಹಿತರು ಕಳೆದ 3 ತಿಂಗಳಿನಿಂದ ತಮ್ಮ ಊರಾದ ಕೋಝಿಕ್ಕೋಡ್‌ನಲ್ಲಿ ಅದೇ ಕೆಲಸವನ್ನು ಮುಂದುವರಿಸಿದ್ದರು. ಅವರಿಗೆ ಪರಿಚಯವಿದ್ದ ಮಂಗಳೂರಿನ ಸರ್ಫರಾಜ್ ಎಂಬಾತ ವ್ಯವಹಾರಕ್ಕೆ ಸಂಬಂಧಿಸಿ ನಾಲ್ವರನ್ನು ಮಂಗಳೂರಿಗೆ ಕರೆದಿದ್ದ. ಅದರಂತೆ ಅವರು ಜು. 11ರಂದು ಸಂಜೆ ಮಂಗಳೂರಿನ ಪಂಪ್‌ವೆಲ್‌ಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಸರ್ಫರಾಜ್‌ನನ್ನು ಭೇಟಿಯಾದ ಅವರು ಬಳಿಕ ತಾವು ಬಂದಿದ್ದ ಕಾರಿನಲ್ಲಿ ಆತನನ್ನು ಕೂರಿಸಿಕೊಂಡು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತನಾಡಿದರು.
ಈ ಸಂದರ್ಭ ಸರ್ಫರಾಜ್ “ಮಲ್ಲೂರಿನಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದಾನೆ, ಅಲ್ಲಿಗೆ ಹೋಗಿ ವ್ಯವಹಾರದ ಬಗ್ಗೆ ಮಾತನಾಡುವ’ ಎಂದು ನಂಬಿಸಿ ಕರೆದೊಯ್ದನು. ಅಲ್ಲಿನ ಮನೆಯೊಂದರ ಒಳಗೆ ಹೋದಾಗ ಮನಾಫ್ ಮತ್ತು ಸ್ನೇಹಿತರನ್ನು ಒಳಗಿದ್ದ ನಾಲ್ವರು ದೂಡಿ ಹಾಕಿ ಹಲ್ಲೆ ಮಾಡಿದರು. ಅಲ್ಲಿ ಸುಮಾರು 10 ಜನರಿದ್ದು, 4-5 ಮಂದಿ ತಲವಾರು, ಉಳಿದವರು ಚೂರಿ ಹಿಡಿದು ಹೆದರಿಸಿದರು. ಬಳಿಕ ಯಾಸರ್‌ನ ಕಿಸೆಯಲ್ಲಿದ್ದ 90,000 ರೂ. ನಗದು, ಮುಹಮ್ಮದ್ ಸಾಹಿರ್‌ನ ಗೂಗಲ್ ಪೇಯಿಂದ 10 ಸಾವಿರ ರೂ. ವರ್ಗಾಯಿಸಿದರು. ಇನ್ನೊಬ್ಬ ವ್ಯಕ್ತಿ ಯಾಸರ್ ಅರಾಫತ್‌ನ ಕುತ್ತಿಗೆಯ ಬಳಿ ಪಿಸ್ತೂಲ್ ಮಾದರಿಯ ವಸ್ತುವನ್ನು ಹಿಡಿದು ಬೆದರಿಕೆ ಹಾಕಿದನು. ಬಳಿಕ ಮೊಬೈಲ್ ಲಾಕ್ ತೆಗೆಸಿ ಷೇರಿನ ವ್ಯವಹಾರಕ್ಕೆ ಸಂಬಂಧಿಸಿದ ಸ್ಟಾಕ್‌ನ ಅಕೌಂಟ್‌ನಿಂದ 28 ಲಕ್ಷ ರೂ. ಮೌಲ್ಯದ ಷೇರುಗಳನ್ನು ವರ್ಗಾವಣೆ ಮಾಡಿಸಿಕೊಂಡರು. ಪರ್ಸ್ ವಿವಿಧ ದಾಖಲೆ, 1,000 ರೂ. ಕಿತ್ತುಕೊಂಡರು. ಅಕ್ರಮ ಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ಅರ್ಶಕ್ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.