ಚೆನ್ನೈ: ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಸಂಭವಿಸಿದ ಅವಘಡದಿಂದಾಗಿ ತಮಿಳಿನ ಜನಪ್ರಿಯ ಸಾಹಸ ಕಲಾವಿದನೋರ್ವ ಭಾನುವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರು ಮೋಹನ್ ರಾಜ್ ಅಲಿಯಾಸ್ ಎಸ್.ಎಮ್.ರಾಜು (52) ಎಂದು ತಿಳಿದು ಬಂದಿದೆ.
ನಾಗಪಟ್ಟಿಣಂನಲ್ಲಿ ನಡೆಯುತ್ತಿದ್ದ ನಟ ಆರ್ಯ ಅಭಿನಯದ, ಪಾ.ರಂಜಿತ್ ನಿರ್ದೇಶನದ ತಮಿಳು ಚಿತ್ರವಾದ “ವೆಟ್ಟುವಮ್’ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ ಎಂದು ವರದಿ ತಿಳಿಸಿದೆ.
ವೇಗವಾಗಿ ಸಾಗುವ ಕಾರು, ಆಗಸದೆಡೆಗೆ ಚಿಮ್ಮಿ ನೆಲಕ್ಕೆ ಇಳಿಯುವಂತಹ ದೃಶ್ಯವನ್ನು ಚಿತ್ರತಂಡ ಚಿತ್ರೀಕರಿಸುತ್ತಿತ್ತು. ಈ ವೇಳೆ ಕಾರನ್ನು ಮೋಹನ್ ಚಲಾಯಿಸುತ್ತಿದ್ದರು. ಆದರೆ ದುರದೃಷ್ಟವಶಾತ್ ಕಾರು ಸುರಕ್ಷಿತವಾಗಿ ನೆಲಕ್ಕಿಳಿಯದ ಕಾರಣ ಮೋಹನ್ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟರು ಎಂದು ಚಿತ್ರತಂಡ ತಿಳಿಸಿದೆ ಎಂದು ವರದಿ ತಿಳಿಸಿದೆ.