ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೇ ದಾಂಡೇಲಿಯ ದೇಶಪಾಂಡೆ ನಗರದಲ್ಲಿ ಸಂಘದ ಸಾಲ ತೀರಿಸಲು ದಂಪತಿ 20 ದಿನದ ಮಗುವನ್ನು ಮಾರಾಟ ಮಾಡಿರುವ ಘಟನೆ ನಡೆದಿದೆ.
ಮಗು ಖರೀದಿಸಿದವರು ಬೆಳಗಾವಿಯ ಆನಗೋಳದ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47), ಕಿಶನ್ ಐರೇಕರ (42) ಎಂದು ತಿಳಿದು ಬಂದಿದೆ.
ಹಳೇ ದಾಂಡೇಲಿಯ ದೇಶಪಾಂಡೆ ನಗರದ ನಿವಾಸಿಯಾದ ಮಾಹೀನ್ ಎಂಬವರು ಜೂನ್ 17 ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ ವಸೀಂ ಚಂಡು ಪಟೇಲ್ ಮೈತುಂಬಾ ಸಾಲ ಮಾಡಿಕೊಂಡಿದ್ದರು. ಸಂಘದ ಸಾಲಗಾರರು ಸಾಲದ ಹಣವನ್ನು ವಾಪಸ್ ಕೊಡುವಂತೆ ಬೆನ್ನು ಬಿದ್ದಿದ್ದರು. ಸಾಲಗಾರರ ಕಾಟ ತಾಳಲಾರದೆ ವಸೀಂ ಚಂಡು ಪಟೇಲ್ ಮತ್ತು ಮಾಹೀನ್ ದಂಪತಿ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದರು ಎಂದು ಹೇಳಲಾಗಿದೆ.
ಜು.8ರಂದು ಧಾರವಾಡಕ್ಕೆ ಹೋಗಿ, ಬೆಳಗಾವಿಯ ನೂರ್ ಅಹಮ್ಮದ್ ಎಂಬಾತನಿಗೆ 3 ಲಕ್ಷ ರೂ.ಗೆ ಮಗುವನ್ನು ಮಾರಾಟ ಮಾಡಿದ್ದರು. ಮಾಹೀನ್ ಮನೆಯಲ್ಲಿ ಮಗು ಕಾಣದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ಅವರು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅಂಗನವಾಡಿ ಕಾರ್ಯಕರ್ತೆಯ ದೂರಿನ ಹಿನ್ನೆಲೆಯಲ್ಲಿ ಪಿಎಸ್ಐ ಅಮೀನಸಾಬ ಅತ್ತಾರ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು.
ಉತ್ತರ ಕನ್ನಡ ಪೊಲೀಸರು ಬೆಳಗಾವಿಗೆ ತೆರಳಿ ಮಗುವನ್ನು ಖರೀದಿಸಿದ್ದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ ಮತ್ತು ಕಿಶನ್ ಐರೇಕರ್ನನ್ನು ಬಂಧಿಸಿ, ಮಗುವನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ದಾಂಡೇಲಿ ಪೊಲೀಸರು ಶಿರಸಿ ಮಕ್ಕಳ ಕಲ್ಯಾಣ ಸಮಿತಿಗೆ ಮಗುವನ್ನು ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.