ಬೆಂಗಳೂರು: ಹನುಮಂತ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಲೇಔಟ್‌ನಲ್ಲಿ ಖಾಸಗಿ ವಾಹಿನಿಯ ನಿರೂಪಕಿ, ಅಮೃತಧಾರೆ ಧಾರಾವಾಹಿಯ ನಟಿಯ ಮೇಲೆ ಆಕೆಯ ಪತಿಯೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಮಂಜುಳಾ ಅಲಿಯಾಸ್ ಶ್ರುತಿ ಪತಿಯಿಂದ ಚಾಕು ಇರಿತಕ್ಕೊಳಗಾದ ನಟಿಯಾಗಿದ್ದು. ಘಟನೆಗೆ ಸಂಬಂಧಿಸಿ ಪೊಲೀಸರು ಪತಿ ಅಮರೇಶ್ ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಕಳೆದ ಜುಲೈ 4 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಅಮೃತಧಾರೆ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಶ್ರುತಿ ಇಪ್ಪತ್ತು ವರ್ಷಗಳ ಹಿಂದೆ ಅಮರೇಶ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರಿದ್ದು ಹನುಮಂತನಗರದಲ್ಲಿ ವಾಸವಾಗಿದ್ದರು. ಈ ನಡುವೆ ಶ್ರುತಿ ಹಾಗೂ ಅಮರೇಶ್ ನಡುವೆ ವೈಮನಸ್ಸು ಉಂಟಾಗಿದ್ದು ಇದಾದ ಬಳಿಕ ಕೆಲ ಸಮಯದಿಂದ ಶ್ರುತಿ ತನ್ನ ಸಹೋದರನ ಮನೆಯಲ್ಲಿ ಇದ್ದರು ಎಂದು ಹೇಳಲಾಗಿದೆ.
ಅದರಂತೆ ಜುಲೈ 3 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ರಾಜಿ ಮಾತುಕತೆ ನಡೆಸಿ ಹನುಮಂತನಗರದ ಮನೆಗೆ ಶ್ರುತಿ ಬಂದಿದ್ದರು ಎನ್ನಲಾಗಿದೆ.
ಮಾರನೇ ದಿನ (ಜು.4) ಮಕ್ಕಳು ಕಾಲೇಜಿಗೆ ಹೋದ ವೇಳೆ ಪತಿ ಅಮರೇಶ್ ಮತ್ತು ಶ್ರುತಿ ನಡುವೆ ಜಗಳವಾಗಿದೆ. ಈ ಸಂದರ್ಭ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಳಿಕ ಅಮರೇಶ್ ಪತ್ನಿ ಶ್ರುತಿ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಚಾಕುವಿನಿಂದ ಮೂರೂ ನಾಲ್ಕು ಬಾರಿ ಇರಿದಿದ್ದಾನೆ, ಘಟನೆಯಿಂದ ಶ್ರುತಿ ಅವರ ತೊಡೆ, ಕುತ್ತಿಗೆ ಭಾಗಗಳಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.
ಶ್ರುತಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಅಮರೇಶ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.