ಮಲ್ಪೆ: ಸೈಂಟ್ ಮೇರಿಸ್ ದ್ವೀಪ ಸಮೀಪ ಉತ್ತರ ಬದಿಯಲ್ಲಿ ಮೀನುಗಾರಿಕೆಗೆ ತೆರಳಿದ ಡಿಸ್ಕೋ ನಾಡದೋಣಿಗೆ
ಬೃಹತ್ ತೆರೆಯೊಂದು ಬಡಿದು ದೋಣಿ ಮಗುಚಿ ಬಿದ್ದು ಓರ್ವ ಮೀನುಗಾರ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ಮಲ್ಪೆ ನಡೆದಿದೆ.
ಮೃತಪಟ್ಟವರು ಉದ್ಯಾವರ ಪಿತ್ರೋಡಿಯ ನಿವಾಸಿ ನೀಲಾಧರ ಜಿ. ತಿಂಗಳಾಯ (51) ಎಂದು ತಿಳಿದು ಬಂದಿದೆ.
ಲಕ್ಷ್ಮಣ್ ಶ್ರೀಯನ್ ಮತ್ತು ಹರೀಶ್ ಸುವರ್ಣ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ಬೆಳಗ್ಗೆ ಉದ್ಯಾವರದ ಡಿಸ್ಕೋ ನಾಡದೋಣಿಯಲ್ಲಿ ಅವರು ಇತರ 24 ಮಂದಿ ಮೀನುಗಾರರ ಜೊತೆಗೆ ಮೀನುಗಾರಿಕೆಗೆ ತೆರಳಿದ್ದರು. ಸೈಂಟ್‌ಮೇರಿಸ್ ದ್ವೀಪದಿಂದ ಸುಮಾರು 1 ಕಿ.ಮೀ ದೂರದಲ್ಲಿ ಸಮುದ್ರದಲ್ಲಿ ಮೀನಿಗೆ ಬಲೆ ಹಾಕುವಾಗ ದೊಡ್ಡ ತೆರೆಯೊಂದು ದೋಣಿಗೆ ಬಡಿದು ದೋಣಿ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.
ಘಟನೆಯಿಂದ ದೋಣಿಯಲ್ಲಿದ್ದ ಎಲ್ಲರೂ ನೀರಿಗೆ ಬಿದ್ದರು. ಸಮೀಪದಲ್ಲಿದ್ದ ಇತರ ದೋಣಿಯವರು ಅದರಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.
ಈ ಸಂದರ್ಭ ನೀಲಾಧರ ಅವರು ಮೀನಿನ ಬಲೆಯಲ್ಲಿ ಸಿಲುಕಿಕೊಂಡಿದ್ದರು. ಅವರನ್ನು ಇತರ ದೋಣಿಯವರು ಬಲೆಯಿಂದ ಬಿಡಿಸಿ ದಡಕ್ಕೆ ತಂದಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.