ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಕಲ್ ಎಸ್ಟೇಟ್ ನ ತೋಟದಲ್ಲಿ ನಡೆದ ಜಾನುವಾರು ಹತ್ಯೆ ಪ್ರಕರಣ ಸಂಬಂಧ ಅಸ್ಸಾಂ ಮೂಲದ 6 ಕೂಲಿ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
2025ರ ಜುಲೈ 9ರ ಮಧ್ಯಾಹ್ನ ಮರ್ಕಲ್ ಎಸ್ಟೇಟ್ ನೊಳಗೆ ಘಟನೆ ಸಂಭವಿಸಿದೆ. ಬಾಳೂರು ಠಾಣೆಯ ಪಿಎಸ್ ಐ ದಿಲೀಪ್ ಕುಮಾರ್ ವಿ.ಟಿ. ಅವರು ತೋಟದೊಳಗೆ ಜಾನುವಾರು ಹತ್ಯೆ ನಡೆದಿರುವ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಜಾನುವಾರು ಹತ್ಯೆ ಮಾಡಿರುವ ಸ್ಥಿತಿ ಹಾಗೂ ಮಾಂಸದ ತುಂಡುಗಳು ಬಾಳೆ ಎಲೆಗಳ ಮೇಲೆ ಇರಿಸಿಕೊಂಡಿರುವುದು ಕಂಡು ಬಂದಿದೆ. ಜಾನುವಾರುವಿನ ಅಂಗಾಂಗಗಳನ್ನು ಮಣ್ಣಡಿ ಹಾಕಲು ಗುಂಡಿ ತೋಡಲಾಗಿತ್ತು. ಸ್ಥಳದಲ್ಲಿ ಯಾರೂ ಕಂಡು ಬಂದಿಲ್ಲ.
ಸ್ಥಳದಲ್ಲಿ ಜಾನುವಾರುವಿನ ತಲೆ, ಕಾಲುಗಳು, ಪೂರ್ಣ ಚರ್ಮ, ಲಿವರ್ ಮತ್ತು ಇತರ ಅಂಗಾಂಗಗಳು ಪತ್ತೆಯಾಗಿದೆ. ಅಂದಾಜು 25 ಕೆ.ಜಿ ಮಾಂಸ ಹಾಗೂ 20 ಕೆ.ಜಿ ಪಕ್ಕೆಲುಬು ಮಾಂಸವಿದೆ. ಮರದ ತುಂಡು ಮತ್ತು ಗುಂಡಿ ತೋಡಲು ಬಳಸಿದ ಗುದ್ದಲಿ ಜಪ್ತಿ ಮಾಡಲಾಗಿದೆ.
ಹತ್ಯೆ ಬಳಿಕ ಭಾಗಶಃ ಅಂಗಾಂಗಗಳನ್ನು ಗುಂಡಿಗೆ ಹಾಕಿ ಮಣ್ಣಿನಲ್ಲಿ ಮುಚ್ಚಿರುವುದು ಕಂಡು ಬಂದಿದೆ.
ಬಳಿಕ ಪೊಲೀಸರು ತನಿಖೆ ನಡೆಸಿ ಮರ್ಕಲ್ ಎಸ್ಟೇಟ್‌ನ 6 ಅಸ್ಸಾಂ ಮೂಲದ ಕಾರ್ಮಿಕರನ್ನು ಬಂಧಿಸಿದ್ದಾರೆ.
ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಪೊಲೀಸರು ಮುಂದಾಗಿದ್ದಾರೆ. ಜಾನುವಾರು ಅಂಗಾಂಗಗಳನ್ನು ಪಶು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಉಪ ವಿಭಾಗದ ದಂಡಾಧಿಕಾರಿಗಳ ಅನುಮತಿ ಪಡೆದು ಅಂಗಾಂಗಗಳನ್ನು ನಾಶಪಡಿಸಲು ಕ್ರಮವಹಿಸಲಾಗುವುದು ಎಂದು ತಿಳಿದು ಬಂದಿದೆ.