ರಾಯಚೂರು: ರಿಮ್ಸ್ ಆಸ್ಪತ್ರೆಯಲ್ಲಿನ ಮಗು ಕಳ್ಳತನದ ಶಂಕೆ ಹಿನ್ನೆಲೆ ಇದೀಗ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಶರಣಪ್ಪ(32) ಎಂದು ತಿಳಿದು ಬಂದಿದೆ.
ಸೀರೆ ಧರಿಸಿ ಬಂದು ಆಸ್ಪತ್ರೆಯಲ್ಲಿ ತಡರಾತ್ರಿ ಓಡಾಡಿ ಆತಂಕ ಸೃಷ್ಟಿಸಿದ್ದ. ಸ್ಥಳೀಯರ ದೂರು ಹಿನ್ನೆಲೆ ಇದೀಗ ನಗರದ ಮಾರ್ಕೆಟ್ ಯಾರ್ಡ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ಶರಣಪ್ಪ ರಾತ್ರೋರಾತ್ರಿ ಸೀರೆಯುಟ್ಟು ಆಸ್ಪತ್ರೆ ಎಮರ್ಜನ್ಸಿ ವಾರ್ಡ್ ಒಳಹೋಗುತ್ತಿದ್ದ. ಯಾವ ವಾರ್ಡ್ಗೆ ಹೋಗಬೇಕು, ಹೆಸರೇನು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದು, ಈ ವೇಳೆ ಏನೇನೋ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಹಸುಗೂಸು ಕಳ್ಳತನದ ಶಂಕೆ ಹಿನ್ನೆಲೆ ಪೊಲೀಸರಿಗೆ ಸ್ಥಳೀಯರು ದೂರು ನೀಡಿದ್ದು, ಬಳಿಕ ಶರಣಪ್ಪ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದು, ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೆ ಎಂದು ಹೇಳಿದ್ದಾರೆ.