ಆನೇಕಲ್: ಆನೇಕಲ್ ತಾಲೂಕಿನ ದೊಡ್ಡ ನಾಗಮಂಗಲದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ಭೇಟಿಯಾಗಲು ಬಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.
ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದು, ಮೂವರು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆ ಮೂರು ದಿನಗಳ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ(35)ಗೆ ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ತಮಿಳುನಾಡು ಮೂಲದ ನಾಗೇಶ್ ಸ್ನೇಹಿತನಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಲೊಕೇಶನ್ ಕಳಿಸಿ ಅಲ್ಲಿಗೆ ಬರುವಂತೆ ಹೇಳಿದ್ದು, ಅಲ್ಲಿಂದ ದೊಡ್ಡನಾಗಮಂಗಲ ಸಮೀಪದ ಶ್ರೀ ಸಾಯಿ ಬಡಾವಣೆಯ ತನ್ನ ಸ್ನೇಹಿತನ ಮನೆಗೆ ನಾಗೇಶ್ ಕರೆದೊಯ್ದಿದ್ದಾನೆ ಎಂದು ತಿಳಿದು ಬಂದಿದೆ.
ಸ್ವಲ್ಪ ಹೊತ್ತಿನಲ್ಲಿ ಆ ಮನೆಗೆ ಬಂದ ಇಬ್ಬರು, ಮಹಿಳೆಯನ್ನು ಬೆದರಿಸಿ 12 ಸಾವಿರ ರೂ. ಹಾಗೂ ಇಬ್ಬರ ಮೊಬೈಲ್‌ಗಳನ್ನೂ ಕಸಿದುಕೊಂಡಿದ್ದಾರೆ. ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿ, ಮನೆಯಲ್ಲಿದ್ದ ಫ್ರಿಡ್ಜ್ ವಾಷಿಂಗ್‌ಮೆಷನ್‌ಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸಿಸಿ ಕ್ಯಾಮರಾದ ವೀಡಿಯೊ ತುಣುಕುಗಳ ಆಧಾರದಲ್ಲಿ ನಾಗೇಶ್ ಸಹಿತ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಗಂತುಕರು ನಾಗೇಶ್‌ನ ಪರಿಚಯಸ್ಥರಾಗಿದ್ದು, ಎಲ್ಲವೂ ಪೂರ್ವಯೋಜಿತವಾಗಿ ಈ ಕೃತ್ಯ ಎಸಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.