ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರದಲ್ಲಿ ತರಕಾರಿ ಸಾಗಾಟದ ಬೊಲೆರೋ ಪಿಕಪ್ ವಾಹನವು ಕಂಟೈನರ್‌ಗೆ ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ಬುಧವಾರ ಮುಂಜಾನೆ ಸಂಭವಿಸಿದೆ.
ಮೃತಪಟ್ಟವರು ಪಿಕಪ್‌ನಲ್ಲಿದ್ದ ಮಂಡ್ಯ ಮೂಲದ ನಿಂಗಪ್ಪ (52) ಎಂದು ತಿಳಿದು ಬಂದಿದೆ.
ಪಿಕಪ್ ಚಾಲಕ ಪ್ರಶಾಂತ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ಜಿಲ್ಲೆಯ ಪ್ರಶಾಂತ್ ಎಂಬಾತ ತನ್ನ ಬೊಲೆರೊ ಪಿಕಪ್ ವಾಹನದಲ್ಲಿ ನಿಂಗಪ್ಪ ಅವರೊಂದಿಗೆ ಮೈಸೂರಿನ ಬಂಡಿಪಾಳ್ಯದಿಂದ ಆದಿ ಉಡುಪಿಗೆ ತರಕಾರಿಯನ್ನು ತರುತ್ತಿದ್ದಾಗ ಉದ್ಯಾವರದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಪಿಕಪ್ ಚಾಲಕ ಪ್ರಶಾಂತ್ ವಾಹನವನ್ನು ಉದ್ಯಾವರ ಜಯಲಕ್ಷ್ಮೀ ಬಸ್ ನಿಲ್ದಾಣದ ಸಮೀಪದ ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಹೋಗಿ, ಮುಂಭಾಗದಲ್ಲಿ ಸಂಚರಿಸುತ್ತಿದ್ದ ಕಂಟೈನರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ರಸ್ತೆಯ ಬಲಬದಿಯಲ್ಲಿ ಸಂಚರಿಸಿ ಅದೇ ಕಂಟೈನರ್‌ನ ಹಿಂಬದಿಯ ಬಲಬದಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದು ಬಂದಿದೆ.
ಡಿಕ್ಕಿಯ ರಭಸಕ್ಕೆ ಪಿಕಪ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಪ್ರಶಾಂತ್ ಮತ್ತು ಸಹ ಪ್ರಯಾಣಿಕ ನಿಂಗಪ್ಪ ವಾಹನದ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ ಸೇರಿದ ಸಾರ್ವಜನಿಕರು ಮತ್ತು ಸ್ಥಳೀಯರು ಇಬ್ಬರನ್ನೂ ಹೊರಗೆ ತೆಗೆದು ಆ್ಯಂಬುಲೆನ್ಸ್ ಮೂಲಕ ಉಡುಪಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ತಲುಪುವಷ್ಟರಲ್ಲೇ ಗಾಯಾಳು ನಿಂಗಪ್ಪ ಮೃತಪಟ್ಟಿರುವುದಾಗಿ ವೈದರು ತಿಳಿಸಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.