ಯಾದಗಿರಿ: ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಜಾತಿ ನಿಂದನೆ ಪ್ರಕರಣಕ್ಕೆ ಹೆದರಿ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗನ ಸಾವಿನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಮರಕ್ಕೆ ನೇಣುಬಿಗಿದುಕೊಂಡು ಮೆಹಬೂಬ್(22) ಆತ್ಮಹತ್ಯೆಗೆ ಶರಣಾಗಿದ್ದು, ಹೃದಯಾಘಾತದಿಂದ ತಂದೆ ಸೈಯದ್ ಅಲಿ(50) ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಬೇರೆಯವರ ಜಮೀನಿನ ಮೂಲಕ ತನ್ನ ಜಮೀನಿಗೆ ನಡೆದುಕೊಂಡು ಹೋಗುವ ವಿಚಾರವಾಗಿ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ದಲಿತ ಕುಟುಂಬದ ಜೊತೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿದ್ದರು. ಆದರೆ ಬೇರೆ ಊರಿಂದ ಬಂದ ದಲಿತ ಮುಖಂಡ ಓರ್ವ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿ, ಜೈಲಿಗೆ ಕಳುಹಿಸುತ್ತೇನೆ ಎಂದು ಮೆಹಬೂಬ್ಗೆ ಬೆದರಿಕೆ ಹಾಕಿದ್ದರು.
ಪ್ರಕರಣ ದಾಖಲಾದರೆ ಮರ್ಯಾದೆ ಹೋಗುತ್ತದೆ, ಜೈಲಿಗೆ ಹೋಗಬೇಕಾಗುತ್ತೆ ಅಂತ ಮೆಹಬೂಬ್ ಹೆದರಿದ್ದಾನೆ. ಇದೆ ಕಾರಣಕ್ಕೆ ಬುಧವಾರದಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಮಗನ ಆತ್ಮಹತ್ಯೆ ಸುದ್ದಿ ತಿಳಿದು ಶಾಕ್ಗೆ ಒಳಗಾದ ತಂದೆಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸೈಯದ್ ಸಲಿ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.