ಕಾಸರಗೋಡು: ನಾಪತ್ತೆಯಾಗಿದ್ದ ಯುವಕನ ಮೃತದೇಹ ಕಾಸರಗೋಡು ಬಂದರು ಸಮೀಪದ ಕಸಬಾ ತೀರದಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮೃತ ಯುವಕ ಕಾಸರಗೋಡು ಕಸಬಾದ ಆದಿತ್ಯ (22) ಎಂದು ತಿಳಿದು ಬಂದಿದೆ.
ಮೀನು ಹಿಡಿಯಲು ಬಂದರು ಸಮೀಪದ ಅಳಿವೆ ಬಾಗಿಲು ಬಳಿಗೆ ಬಂದಿದ್ದ ಸಂದರ್ಭದಲ್ಲಿ ಮೃತ ದೇಹ ಪತ್ತೆಯಾಗಿದ್ದು, ಮೃತದೇಹದಲ್ಲಿ ಗಾಯಗಳು ಕಂಡುಬಂದಿವೆ.
ದೇಹದಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದು, ಈ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆದಿತ್ಯನ ಬೈಕ್ ಹಾಗೂ ಮೊಬೈಲ್ ಬಂದರು ಬಳಿ ಲಭಿಸಿತ್ತು. ಮೀನು ಹಿಡಿಯಲು ಸಮುದ್ರಕ್ಕೆ ಬಲೆ ಬೀಸಿದಾಗ ಮೃತದೇಹ ಬಲೆಗೆ ಸಿಲುಕಿಕೊಂಡಿದೆ. ಆದಿತ್ಯನ ದೇಹದಲ್ಲಿದ್ದ ಚಿನ್ನದ ಸರ, ಕೈ ಚೈನ್ ನಾಪತ್ತೆಯಾಗಿರುವುದಾಗಿ ಸಂಬಂಧಿಕರು ದೂರಿದ್ದಾರೆ.
ಆದಿತ್ಯ ನಾಪತ್ತೆಯಾದ ಬಗ್ಗೆ ಕರಾವಳಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಂಗಳವಾರ ಶೋಧ ನಡೆಸಿದ್ದರು. ಈ ನಡುವೆ ಬುಧವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
ಕಾಸರಗೋಡು ನಗರ ಠಾಣಾ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.