ಬಿಹಾರ: ಬಿಹಾರದ ಪೂರ್ಣಿಯಾ ಜಿಲ್ಲೆಯ ಟೆಟ್ಮಾ ಗ್ರಾಮದಲ್ಲಿ ಮಾಟ ಮಂತ್ರ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ ಒಂದೇ ಕುಟುಂಬದ ಐದು ಮಂದಿಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆ ಮಾಡಿ, ಮೃತದೇಹಗಳನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.
ಘಟನಾ ಸಂಬಂಧ ಒಬ್ಬ ಮಾಂತ್ರಿಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಸುಮಾರು 30ರಿಂದ 40 ಗ್ರಾಮಸ್ಥರು ಭಾಗಿಯಾಗಿದ್ದರು ಎನ್ನಲಾಗಿದೆ.
ದುಷ್ಕರ್ಮಿಗಳ ದಾಳಿ ವೇಳೆ ಈ ಕುಟುಂಬದ 16 ವರ್ಷದ ಬಾಲಕ ಉದ್ರಿಕ್ತ ಗುಂಪಿನಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ತನ್ನ ಅಜ್ಜಿ ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾನೆ.
ಬಳಿಕ ಬಾಲಕ ನೀಡಿದ ಮಾಹಿತಿ ಆಧರಿಸಿ ಪೊಲೀಸರಿಗೆ ದೂರು ನೀಡಲಾಗಿತ್ತು. ಹೀಗಾಗಿ ಘಟನೆ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಸೀತಾ ದೇವಿ, ಕಾಳಿ, ರಾಣಿ ದೇವಿ, ಬಾಬು ಲಾಲ್ ಮತ್ತು ಮಂಜೀತ್ ರಾಮ್ ಹತ್ಯೆಗೊಳಗಾದವರು ಎಂದು ತಿಳಿದು ಬಂದಿದೆ. ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿ ಬಳಿಕ ಶವಗಳನ್ನು ಟ್ರ್ಯಾಕ್ಟರ್ ನಲ್ಲಿ ಪೊದೆವರೆಗೂ ತೆಗೆದುಕೊಂಡು ಹೋಗಿ ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.