ಬೆಂಗಳೂರು: ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪದಡಿ ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿಯೊಬ್ಬರ ವಿರುದ್ಧ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
41 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಹಿಳಾ ಠಾಣೆ ಪೊಲೀಸರು ಐಎಸ್‌ಡಿಯ ಡಿವೈಎಸ್ಪಿ ಆರ್.ಶಂಕರಪ್ಪ ಹಾಗೂ ಅವರ ಸ್ನೇಹಿತೆ ಜ್ಯೋತಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
2003ರಲ್ಲಿ ಶಂಕರಪ್ಪ ದೂರುದಾರ ಮಹಿಳೆಯನ್ನು ಮದುವೆಯಾಗಿದ್ದು, ಈ ಸಂದರ್ಭ ಶಂಕರಪ್ಪಗೆ ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ, ಬೈಕ್ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕೊಡಲಾಗಿತ್ತು. ಶಂಕರಪ್ಪ ಶಿಕ್ಷಕ ವೃತ್ತಿ ಬಿಟ್ಟು ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಿದ್ದರು. ಪೊಲೀಸ್ ಇಲಾಖೆಗೆ ಸೇರಿದ ಮೇಲೆ ತನ್ನ ಸ್ಟೇಟಸ್ ಜಾಸ್ತಿಯಾಗಿದ್ದು, ಅದಕ್ಕೆ ತಕ್ಕಂತೆ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಶೌಚಾಲಯದಲ್ಲಿ ಜಾರಿ ಬೀಳುವಂತೆ ಒದ್ದಿದ್ದಾರೆ. ತಲೆಯ ಮೇಲೆ ಉಸಿರು ಗಟ್ಟಿಸುವಂತೆ ಮಾಡಿದ್ದಾರೆ. ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ, ಜನವರಿಯಲ್ಲಿ ಜ್ಯೋತಿ ಎಂಬಾಕೆಯನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದರು. ಈ ಕುರಿತು ಜ್ಯೋತಿಯ ಜೊತೆ ಮಾತನಾಡಲಾಗಿತ್ತು. ಆಕೆ ಕೂಡ ತನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಶಂಕರಪ್ಪ ಮತ್ತು ಅವರ ಸ್ನೇಹಿತೆ ಜ್ಯೋತಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಹಿಳೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.