ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮದಲ್ಲಿ ಪ್ರೇಯಸಿಯನ್ನು ತನ್ನಿಂದ ದೂರ ಮಾಡಿದ್ದಕ್ಕೆ ಪ್ರಿಯಕರ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ವಿಷ ಸೇವಿಸಿದ ಪ್ರಿಯಕರ ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಗ್ರಾಮದ ನಿವಾಸಿ ಶೇಖರ್ (35) ಎಂದು ತಿಳಿದು ಬಂದಿದೆ.
ಶೇಖರ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನ ಬಸ್ ಚಾಲಕರಾಗಿದ್ದಾರೆ. ಶೇಖರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದಂಡಿಗಾನಹಳ್ಳಿ ಗ್ರಾಮದ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದಾರೆ.
ಯುವತಿ ಚಿಕ್ಕಬಳ್ಳಾಪುರ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಾಂಗ ಮಾಡುತ್ತಿದ್ದಾರೆ. ಯುವತಿ ಪ್ರತಿದಿನ ಕಾಲೇಜು ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದರು. ಇಬ್ಬರ ಮಧ್ಯೆ ಸ್ನೇಹ ಬೆಳೆದಿದೆ, ಸ್ನೇಹ ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಪ್ರೀತಿಸಲು ಆರಂಭಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಹೋಗಿ ದೇವಸ್ಥಾನವೊಂದರಲ್ಲಿ ಮದುವೆನೂ ಆಗಿದ್ದರು. ಆದರೆ, ಯುವತಿಯ ಪೋಷಕರು ತಮ್ಮ ಮಗಳು ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಆಗ ಜೋಡಿ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಠಾಣೆಯಲ್ಲೇ ದಂಪತಿಯನ್ನು ದೂರ ಮಾಡಲು ಯುವತಿಯ ಪೊಷಕರು ಪ್ರಯತ್ನಿಸಿದ್ದಾರೆ. ಪೊಲೀಸರ ಮೇಲೆ ರಾಜಕೀಯ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಆದರೂ, ಯುವತಿ ಏನೇ ಆದ್ರು ಶೇಖರ್ ಜೊತೆ ಹೋಗುವುದಾಗಿ ಪಟ್ಟು ಹಿಡಿದಿದ್ದಳು.
ಆಗ, ಆಷಾಢ ಮಾಸ ಕಳೆದ ನಂತರ ಇಬ್ಬರಿಗೆ ಕಲ್ಯಾಣ ಮಂಟಪದಲ್ಲಿ ಮರು ಮದುವೆ ಮಾಡುವುದಾಗಿ ನಂಬಿಸಿ ಇಬ್ಬರನ್ನೂ ಯುವತಿ ಪೋಷಕರು ತಮ್ಮ ಕಾರಿನಲ್ಲಿ ಕರೆದುಕೊಂಡು ಚಿಕ್ಕಬಳ್ಳಾಪುರದಿಂದ ದೇವನಹಳ್ಳಿ ಹೊರಟಿದ್ದಾರೆ. ದಾರಿ ಮಧ್ಯೆ ಶೇಖರ್ನನ್ನು ಕಾರಿನಿಂದ ಕೆಳಗೆ ತಳ್ಳಿ, ತಮ್ಮ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ.
ಶುಕ್ರವಾರ ಬೆಳಿಗ್ಗೆ ಶೇಖರ್ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಆಕೆಯ ಮನೆ ಬಳಿ ಹೋಗಿದ್ದಾರೆ. ಆಗ ಆಕೆಯ ಪೋಷಕರು ಬೈಯ್ದು ವಾಪಸ್ ಕಳುಹಿಸಿದ್ದಾರೆ. ಇದರಿಂದ ಮನನೊಂದ ಶೇಖರ್ ವಾಪಸ್ ತನ್ನೂರಿಗೆ ಆಗಮಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.