ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ನಿಯಂತ್ರಣ ತಪ್ಪಿ ಇನ್ನೋವಾ ಕಾರು ಪಲ್ಟಿಯಾಗಿದ್ದು, ಮಂಚೇನಹಳ್ಳಿಯ ಬೀಮೇಶ್ವರ ಬೆಟ್ಟದ ದೇವಸ್ಥಾನಕ್ಕೆ ತೆರಳುತ್ತಿದ್ದವರು ಸಾವಿಗೀಡಾಗಿದ್ದಾರೆ. ಕಾರಿನಲ್ಲಿ ಒಟ್ಟು 8 ಮಂದಿ ಇದ್ದರು. ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರನ್ನು ದೊಡ್ಡಬಳ್ಳಾಪುರ ನಗರದ ಕರೇನಹಳ್ಳಿಯ ನಿವಾಸಿಗಳಾದ ಈಶ್ವರಪ್ಪ, ಪುರುಷೋತ್ತಮ, ಕಾಳಪ್ಪ ಮತ್ತು ನಾರಾಯಣಪ್ಪ ಎಂದು ಗುರುತಿಸಲಾಗಿದೆ.
ಎಂಟು ಮಂದಿ ಸ್ನೇಹಿತರು ಜತೆಯಾಗಿ ಇನ್ನೋವಾ ಕಾರಿನಲ್ಲಿ ಮಂಚೇನಹಳ್ಳಿಯ ಬೀಮೇಶ್ವರ ಬೆಟ್ಟದ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಲಾರಿಯೊಂದನ್ನು ಒವರ್ ಟೇಕ್ ಮಾಡುವ ವೇಳೆ ಎದುರಿನಿಂದ ಕೆಎಸ್ಆರ್ಟಿಸಿ ಬಸ್ ಬಂದಿದೆ. ಬಸ್ ಹಾಗೂ ಲಾರಿಯನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ಘಟನೆ ಸಂಭವಿಸಿದೆ.
ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.