ಬಾಗ್‌ಪತ್: ಉತ್ತರ ಪ್ರದೇಶದ ಬಾಗ್ಪತ್ನಲ್ಲಿ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಪೊಲೀಸ್ ಅಧಿಕಾರಿ ಮೇಲೆ ಗುಂಡು ಹಾರಿಸಿ ಹ*ತ್ಯೆಗೈದಿರುವ ಘಟನೆ ವರದಿಯಾಗಿದೆ.
ಸ್ಥಳೀಯ ಕ್ರಿಕೆಟ್ ಪಂದ್ಯದ ಕುರಿತು ಇಬ್ಬರ ನಡುವೆ ವಿವಾದ ನಡೆದಿತ್ತು. ಕೋಪದಲ್ಲಿ ಶಿಕ್ಷಕರೊಬ್ಬರು ಪೊಲೀಸ್ ಅಧಿಕಾರಿಗೆ ಗುಂಡು ಹಾರಿಸಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಮೃತರನ್ನು ಹೆಡ್ ಕಾನ್ಸ್ಟೆಬಲ್ ಅಜಯ್ ಪನ್ವರ್ ಎಂದು ಗುರುತಿಸಲಾಗಿದೆ. ಅವರು ಸಹರಾನ್ಪುರದಲ್ಲಿ ನಿಯೋಜನೆಗೊಂಡಿದ್ದರು. ಒಂದು ವಾರ ರಜೆ ಹಾಕಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಕೆಲವು ದಿನಗಳ ಹಿಂದೆ ಸ್ಥಳೀಯ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಅಜಯ್, ಅದೇ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಮೋಹಿತ್ ಜೊತೆ ವಾಗ್ವಾದ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ, ಅಜಯ್ ವಾಕಿಂಗ್ ಗೆಂದು ಹೊರಗೆ ಹೋಗಿದ್ದಾಗ, ಮೋಹಿತ್ ಜೊತೆ ಮತ್ತೊಮ್ಮೆ ಮಾತಿನ ಚಕಮಕಿ ನಡೆಯಿತು. ವಾಗ್ವಾದ ತೀವ್ರಗೊಂಡು, ಮೋಹಿತ್ ಗುಂಡು ಹಾರಿಸಿ ಅಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಲೆಯ ಬಳಿಕ, ಬಾಗ್‌ಪತ್ ಪೊಲೀಸ್ ವರಿಷ್ಠಾಧಿಕಾರಿ ಸೂರಜ್ ರೈ ಶಂಕಿತನನ್ನು ಪತ್ತೆಹಚ್ಚಲು ನಾಲ್ಕು ತಂಡಗಳನ್ನು ರಚಿಸಿದರು. ಸುಳಿವು ದೊರೆತ ತಕ್ಷಣ, ಪೊಲೀಸರು ಮೋಹಿತ್‌ನನ್ನು ಗ್ರಾಮದ ಬಳಿಯ ಹೊಲದಲ್ಲಿ ಪತ್ತೆಹಚ್ಚಿದರು. ತಪ್ಪಿಸಿಕೊಳ್ಳಲು ಯತ್ನಿಸುವಾಗ ಮತ್ತೆ ಪೊಲೀಸರೆದುರು ಶಿಕ್ಷಕ ಗುಂಡು ಹಾರಿಸಿದ್ದಾರೆ.
ಈ ಸಂದರ್ಭ ಪೊಲೀಸರು ಕೂಡ ಶಿಕ್ಷಕನ ಕಾಲಿಗೆ ಗುಂಡು ಹಾರಿಸಿ ಅವರನ್ನು ಬಂಧಿಸಿದ್ದಾರೆ. ಗಾಯಗೊಂಡ ಆರೋಪಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.