ಉನ್ನಾವೋ: ಉತ್ತರ ಪ್ರದೇಶದ ಉನ್ನಾವೋದಲ್ಲಿ ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಓಡೋಡಿ ಬರುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತಂದೆಯೂ ಮೃತಪಟ್ಟ ಘಟನೆ ವರದಿಯಾಗಿದೆ.
ವಿದ್ಯುತ್ ಸ್ಪರ್ಶಿಸಿ ಮಗ ಸಾವನ್ನಪ್ಪಿದ್ದ ಈ ಸುದ್ದಿ ಕೇಳಿ ತಂದೆ ಬೈಕ್ನಲ್ಲಿ ಮನೆಗೆ ಹೊರಟಿದ್ದರು. ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಗಂಭೀರ ಗಾಯಗಳಾಗಿತ್ತು. ಹತ್ತಿರದ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಮೂರು ವರ್ಷದ ಆಯನ್ಶ್ ಜೈಸ್ವಾಲ್ ಮನೆಯಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಕುಟುಂಬ ಸದಸ್ಯರು ಆತನನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ. ಸುದ್ದಿ ಕೇಳಿದ ತಕ್ಷಣ ತಂದೆ ವಿಷ್ಣು ಕುಮಾರ್ ಅಳುತ್ತಲೇ ಬೈಕ್ ಹತ್ತಿ ಮನೆಯ ಕಡೆಗೆ ಹೊರಟಿದ್ದರು, ದಾರಿ ಮಧ್ಯೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಿದ್ದಾರೆ ಮತ್ತು ಅಪಘಾತ ಮಾಡಿದ ಕಾರು ಮತ್ತು ಅದರ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.