ತಮಿಳುನಾಡು: ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿ ಜನಪ್ರಿಯವಾಗಿರುವ ನಟರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚೆನ್ನೈ ಮೂಲದವರಾದ ಶ್ರೀಕಾಂತ್ (ಶ್ರೀರಾಮ್) ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಎರಡನೇ ನಾಯಕನಾಗಿ ನಟಿಸಿದ್ದಾರೆ. ಇದೀಗ ತಮಿಳುನಾಡು ಪೊಲೀಸರು, ಡ್ರಗ್ಸ್ ಪ್ರಕರಣದಲ್ಲಿ ಶ್ರೀರಾಮ್ ಅವರನ್ನು ಬಂಧಿಸಿದ್ದಾರೆ ಎಂದು ವರದಿಯಗಿದೆ.
ಕೆಲ ದಿನಗಳ ಹಿಂದೆ ಸೇಲಂನಲ್ಲಿ ಪ್ರದೀಪ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆತನ ಪರೀಕ್ಷೆ ನಡೆಸಿದಾಗ ಆತ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿತ್ತು. ಆ ವ್ಯಕ್ತಿಯ ವಿಚಾರಣೆ ನಡೆಸಿದ ಬಳಿಕ ಜಾನ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಆತನಿಂದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಬಳಿಕ ಇನ್ನೂ ಕೆಲವು ವ್ಯಕ್ತಿಗಳ ಬಂಧನ ಆಗಿತ್ತು. ಜಾನ್ ಡ್ರಗ್ ಡೀಲರ್ ಆಗಿದ್ದು, ಆತನಿಂದ ನಟ ಶ್ರೀರಾಮ್, ಡ್ರಗ್ಸ್ ಖರೀದಿ ಮಾಡಿದ್ದಾರೆ ಎಂಬ ವಿಷಯ ಪೊಲೀಸರ ವಿಚಾರಣೆಯಲ್ಲಿ ತಿಳಿದಿತ್ತು.
ಇದೇ ಕಾರಣಕ್ಕೆ ಪೊಲೀಸರು ನಟ ಶ್ರೀರಾಮ್ಗೆ ಕೆಲ ದಿನಗಳ ಹಿಂದೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅಂತೆಯೇ ಶ್ರೀರಾಮ್ ಅವರ ರಕ್ತ ತಪಾಸಣೆ ನಡೆಸಲಾಗಿ ಶ್ರೀರಾಮ್ ಡ್ರಗ್ಸ್ ಸೇವಿಸಿರುವುದು ಖಾತ್ರಿ ಆಗುತ್ತಿದ್ದಂತೆ ಅವರನ್ನು ಬಂಧಿಸಲಾಗಿದೆ.
ಜೂನ್ 23 ರಂದು ಶ್ರೀರಾಮ್ ಬಂಧನ ಆಗಿದ್ದು, ಇನ್ನೊಬ್ಬ ನಟ ಕೃಷ್ಣಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ ಜಾಲವೊಂದರಿಂದ ನಟ ಶ್ರೀರಾಮ್ ಹಾಗೂ ನಟ ಕೃಷ್ಣ ಅವರು ಡ್ರಗ್ಸ್ ಖರೀದಿ ಮಾಡಿ ಸೇವಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಸೇಲಂನಲ್ಲಿ ಬಂಧಿತವಾದ ಪ್ರದೀಪ್ ಅಲಿಯಾಸ್ ಪ್ರಾಡೊ ಹಾಗೂ ಘಾನಾ ಪ್ರಜೆ ಜಾನ್ ಎಂಬುವರು ಎಐಎಡಿಎಂಕೆ ಪಕ್ಷದ ನಾಯಕನಾಗಿದ್ದ ಟಿ ಪ್ರಸಾದ್ ಎಂಬುವರಿಗೆ ಮಾದಕ ವಸ್ತು ಕೊಕೇನ್ ಅನ್ನು ಮಾರಾಟ ಮಾಡಿದದ್ದರು ಎನ್ನಲಾಗಿದೆ. ಪ್ರಸಾದ್, ಕಳೆದ ತಿಂಗಳು ಚೆನ್ನೈನ ಪಬ್ ಒಂದರಲ್ಲಿ ಶ್ರೀರಾಮ್ಗೆ ಡ್ರಗ್ಸ್ ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ.