ದೇವನಹಳ್ಳಿ: ಪ್ರೀತಿಸಿದ ಯುವತಿಯಿಂದ ಕಿರುಕುಳ ಆರೋಪ ಕೇಳಿಬಂದಿದ್ದು, ಮನನೊಂದು ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಜಘಟ್ಟ ಗ್ರಾಮದ ಕೆರೆ ಬಳಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕ ಮಂಜುನಾಥ್ ಎಂದು ತಿಳಿದು ಬಂದಿದೆ.
ಜೂ.13ರಂದು ಸೆಲ್ಫಿ ವೀಡಿಯೊ ಮಾಡಿದ ಮಂಜುನಾಥ್, ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನಾ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರೀತಿಸಿದ ಯುವತಿ ಗಗನ ವಿರುದ್ಧ ಕಿರುಕುಳ ಆರೋಪ ಮಾಡಿರುವ ಮಂಜುನಾಥ್, ಆಕೆಗೆ ಬೇರೊಬ್ಬನ ಜೊತೆ ಸಂಬಂಧವಿತ್ತು ಎಂದು ವೀಡಿಯೊದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಯುವತಿಯ ಕುಟುಂಬಸ್ಥರ ವಿರುದ್ಧ ಕೂಡ ಮಂಜುನಾಥ್ ಕಿರುಕುಳ ಆರೋಪ ಮಾಡಿದ್ದು, ನನಗೆ ನ್ಯಾಯ ಕೂಡಿಸುವಂತೆ ಹೇಳಿದ್ದಾರೆ.
ಮಾತ್ರೆ ಸೇವಿಸಿದ್ದ ಮಂಜುನಾಥ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೊಬೈಲ್ ಪಾಸ್ವರ್ಡ್ ಸಮೇತ ಯುವಕ ಸೆಲ್ಫಿ ವೀಡಿಯೊ ಮಾಡಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿ ಮತ್ತು ಆಕೆ ಕುಟುಂಬಸ್ಥರು ನಾಪತ್ತೆ ಆಗಿದ್ದಾರೆ.