ಚೆನ್ನೈ: ತಮಿಳುನಾಡಿನ ಕೊಡೈಕೆನಾಲ್ ನಲ್ಲಿ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಯುವ ವೈದ್ಯನೋರ್ವ ಆತ್ಮಹ*ತ್ಯೆಗೆ ಶರಣಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಆತ್ಮಹ*ತ್ಯೆಗೆ ಶರಣಾಗಿರುವ ವೈದ್ಯನನ್ನು ದಿಂಡಿಗಲ್ ಜಿಲ್ಲೆಯ ವೇದಚಂದೂರಿನ ಡಾ. ಜೋಶುವಾ ಸಾಮ್ರಾಜ್ ಎಂದು ಗುರುತಿಸಲಾಗಿದೆ.
ಜೋಶುವಾ ಅವರು ವೈದ್ಯಕೀಯ ಪದವಿ ಪೂರ್ಣಗೊಳಿಸಿ ತಮಿಳುನಾಡಿನಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದರು. ಸದ್ಯ ಡಾ. ಜೋಶುವಾ ಸಾಮ್ರಾಜ್ ಸೇಲಂನಲ್ಲಿ ಎಂಡಿ ವ್ಯಾಸಂಗ ಮಾಡುತ್ತಿದ್ದು, ಮಧುರೈನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಜೋಶುವಾ ನಾಪತ್ತೆಯಾಗಿದ್ದರು ಎಂದು ಹೇಳಲಾಗಿದೆ. ಈ ಕುರಿತು ಸಂಬಂಧಿಕರು ವೇದಚಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ವೈದ್ಯನ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು ಆದರೆ ಎಲ್ಲೂ ನಾಪತ್ತೆಯಾದ ವೈದ್ಯನ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ವರದಿಯಾಗಿದೆ.
ಕೊಡೈಕೆನಾಲ್ ನ ಪೂಂಬರೈ ಅರಣ್ಯ ಪ್ರದೇಶದ ಬಳಿ ಕಾರೊಂದು ಮೂರೂ ನಾಲ್ಕು ದಿನಗಳಿಂದ ನಿಂತಿರುವುದು ಕಂಡು ಬಂದಿದ್ದು ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಕಾರನ್ನು ಪರಿಶೀಲಿಸಿದ ವೇಳೆ ಕಾರಿನೊಳಗೆ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಅಲ್ಲದೆ ಮೃತ ವ್ಯಕ್ತಿ ತನ್ನ ದೇಹಕ್ಕೆ ಯಾವುದೋ ಅಮಲು ಪದಾರ್ಥವನ್ನು ಸಿರೆಂಜ್ ಮೂಲಕ ಚುಚ್ಚಿರುವುದು ಕಂಡು ಬಂದಿದ್ದು ಇದರಿಂದ ಆತ್ಮಹ*ತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ ಮೃತ ವ್ಯಕ್ತಿ ನಾಪತ್ತೆಯಾಗಿರುವ ವೈದ್ಯ ಜೋಶುವಾ ಅವರದ್ದೇ ಎಂಬುದನ್ನು ಸಂಬಂಧಿಕರು ದೃಢಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಮೃತದೇಹ ಪತ್ತೆಯಾದ ಕಾರಿನೊಳಗೆ ಡೆತ್ ನೋಟ್ ಕೂಡಾ ಪತ್ತೆಯಾಗಿದ್ದು ಅದರಲ್ಲಿ ಮನೆ ಮಂದಿ ಬಳಿ ಕ್ಷಮೆ ಯಾಚಿಸಿರುವುದು ಕಂಡು ಬಂದಿದೆ. ಅಲ್ಲದೆ ನನ್ನ ಸಾವಿಗೆ ನಾನೇ ಕಾರಣ ಎಂದೂ ಬರೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಪತ್ತೆಯಾದ ವೈದ್ಯನ ಮೊಬೈಲ್ ನಲ್ಲಿ ಆನ್‌ಲೈನ್ ಬೆಟ್ಟಿಂಗ್ ನಿಂದ ಆರ್ಥಿಕ ಸಂಕಷ್ಟ ಹೊಂದಿರುವ ಕುರಿತು ಮಾಹಿತಿಗಳು ಸಿಕ್ಕಿದೆ. ಜೊತೆಗೆ ಪೋಷಕರು ಹೇಳುವಂತೆ ಮನೆ ಮಂದಿಯೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಯಾವುದೋ ಆಲೋಚನೆಯಲ್ಲಿ ಇದ್ದವನಂತೆ ಇರುತ್ತಿದ್ದ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಯಾವುದೋ ಸಾಲದ ಸುಲಿಗೆ ಸಿಲುಕಿರುವ ಸಾಧ್ಯತೆ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಡೆತ್ ನೋಟ್ ಆಧಾರದ ಮೇಲೆ ಜೊತೆಗೆ ಸಂಬಂಧಿಕರ ಮಾಹಿತಿ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.