ಗದಗ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶನಿವಾರ ರಾತ್ರಿ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬೆಟಗೇರಿಯ ನಾಡ ಕಚೇರಿಯ ಉಪ ತಹಶೀಲ್ದಾರ್ ಡಿ.ಟಿ.ವಾಲ್ಮೀಕಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶ ನೀಡಿದ್ದಾರೆ.
ಉಪವಿಭಾಗಾಧಿಕಾರಿ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಿದ ಶಿಸ್ತು ಕ್ರಮದ ವರದಿಯ ಪರಿಶೀಲಿಸಿ, ಉಪ ತಹಶೀಲ್ದಾರ್ ಡಿ.ಟಿ.ವಾಲ್ಮೀಕಿ ಅವರು ಮೇ 17ರಂದು ತಹಶೀಲ್ದಾರ ಕಚೇರಿ ಆವರಣದಲ್ಲಿ ಯುವಕನೊಂದಿಗೆ ತಮ್ಮ ಸಹಚರರೊಡನೆ ಸೇರಿ ಹಲ್ಲೆ ನಡೆಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎಂದು ಹೇಳಲಾಗಿದೆ.
ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತನೆ ತೋರಿ, ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ತೀವ್ರ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿದೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿನಿಗೆ ಲೈಂಗಿಕ ಕಿರುಕುಳ: ಆರೋಪಿಯ ಬಂಧನ
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 2021ರ ನಿಯಮ 3(1) (2) (3) ರ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮದಡಿ ಕಲ್ಪಿಸಿರುವ ಅವಕಾಶಗಳ ಮೇರೆಗೆ ಅಧಿಕಾರಿ ಮೇಲೆ ಶಿಸ್ತು ಕ್ರಮ ಜರುಗಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆಯ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ, ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ರ ನಿಯಮ 98 ರನ್ವಯ ಬಗ್ಗೆ ಪ್ರಮಾಣಿಕರಿಸಿ ಜೀವನಾಂಶ ಭತ್ಯೆ ನೀಡತಕ್ಕದ್ದು ಎಂದು ಸೂಚಿಸಿದ್ದಾರೆ.
ಅಮಾನತು ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿದ್ದ ತಹಶೀಲ್ದಾರ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದ್ದಾರೆ.