Home News ಗುತ್ತಿಗೆದಾರ ಸಂಪತ್ ಶಂಭು ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಗುತ್ತಿಗೆದಾರ ಸಂಪತ್ ಶಂಭು ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

by admin
0 comments

ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಚೌಡ್ಲು ಗ್ರಾಮದ ನಿವಾಸಿ ಗುತ್ತಿಗೆದಾರ ಸಂಪತ್ ಶಂಭು ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ಸೋಮವಾರಪೇಟೆಯ ಹಾನಗಲ್ಲು ಗ್ರಾಮದ ಕಿರಣ್ ಬಿ.ಎಂ (44), ಚೌಡ್ಲು ಗ್ರಾಮದ ಗಣಪತಿ ಪಿ.ಎಂ (44) ಹಾಗೂ ಹಾನಗಲ್ಲು ಗ್ರಾಮದ ಕಿರಣ್ ನ ಪತ್ನಿ ಸಂಗೀತಾ ಎಂದು ತಿಳಿದು ಬಂದಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕೋವಿ, ಕತ್ತಿ, ದೊಣ್ಣೆ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಕೃತ್ಯ ಎಸಗಲು ಆರೋಪಿಗಳಿಗೆ ಸಹಕರಿಸಿದ ಮತ್ತು ಆರೋಪಿಗಳಾದ ಕಿರಣ್ ಹಾಗೂ ಗಣಪತಿ ತಲೆಮರೆಸಿಕೊಳ್ಳಲು ಸಹಕರಿಸಿದ ಇತರೆ ಆರೋಪಿಗಳನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.

banner

ಮೇ 9ರಂದು ತಮ್ಮ ಸ್ನೇಹಿತ ಜಾನ್ ಪೌಲ್ ಅವರ ಕಾರನ್ನು ಕೋರಿಕೆಯ ಮೇರೆಗೆ ತೆಗೆದುಕೊಂಡು ಹೋಗಿದ್ದ ಸಂಪತ್ ಅವರು ಮೇ 10ರ ರಾತ್ರಿಯಾದರು ಬಾರದಿದ್ದಾಗ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಹಳ್ಳಿ ಗ್ರಾಮದಲ್ಲಿ ಮೇ 10 ರಂದು ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಯಸಳೂರು ಪೊಲೀಸರು ಕಾರು ಮಾಲೀಕರ ಪತ್ತೆಗೆ ತನಿಖೆ ಕೈಗೊಂಡರು. ಸಂಪತ್‌ ಅವರು ತೆಗೆದುಕೊಂಡು ಹೋಗಿದ್ದ ಕಾರು ಇದು ಎಂದು ಖಾತ್ರಿಯಾಗಿತ್ತು. ಮೇ 14ರಂದು ಸಕಲೇಶಪುರ ತಾಲೂಕಿನ ವಣಗೂರು ಅರಣ್ಯದಲ್ಲಿ ಸಂಪತ್ ಅವರ ಮೃತದೇಹ ಪತ್ತೆಯಾಗಿತ್ತು. .

ಘಟನಾ ಸ್ಥಳಕ್ಕೆ ಕೊಡಗು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು ಎಂದು ತಿಳಿದು ಬಂದಿದೆ.

ಮೇ 16 ರಂದು ಕಿರಣ್ ನನ್ನು ಬೆಂಗಳೂರಿನಲ್ಲಿ, ಮೇ 17 ರಂದು ಗಣಪತಿಯ ಬೆಳ್ತಂಗಡಿಯಲ್ಲಿ ಹಾಗೂ ಮೇ 18ರಂದು ಸಂಗೀತಾಳನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಯಿತು.

ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಆರೋಪಿ ಸಂಗೀತಾ ಸಂಪತ್ ನನ್ನು ಸೋಮವಾರಪೇಟೆಯ ಹಾನಗಲ್ ಗ್ರಾಮಕ್ಕೆ ಮೇ 9ರಂದು ಬರಲು ಹೇಳುತ್ತಾಳೆ. ಇತರೆ ಆರೋಪಿಗಳಾದ ಗಣಪತಿ ಹಾಗೂ ಕಿರಣ್ ಅವರೊಂದಿಗೆ ಸೇರಿ ಕೋವಿಯಿಂದ ಬೆದರಿಸಿ, ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಕಡಿದು ಕೊಲೆ ಮಾಡುತ್ತಾರೆ. ಸಂಪತ್ ಚಲಾಯಿಸಿಕೊಂಡು ಬಂದಿದ್ದ ಕಾರಿನಲ್ಲಿ ಮೃತದೇಹ ಹಾಕಿ ಸಕಲೇಶಪುರ ತಾಲೂಕು ವಣಗೂರು ಅರಣ್ಯದ ಬಳಿ ಬರುತ್ತಾರೆ. ಮೃತದೇಹ ಎಸೆದು ಕಾರನ್ನು ಕಲ್ಲಳ್ಳಿ ಗ್ರಾಮದಲ್ಲಿ ನಿಲ್ಲಿಸಿ ತಮ್ಮ ಸಂಚಿನಂತೆ ಮೊದಲೇ ಬೆಂಗಳೂರಿನಿಂದ ಬರಮಾಡಿದ್ದ ಬೇರೊಂದು ಕಾರಿನಲ್ಲಿ ಯಾರಿಗೂ ತಿಳಿಯದಂತೆ ವಾಪಸ್ ಬಂದಿದ್ದಾರೆ ಎಂದು ಎಸ್.ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊಲೆಯಾದ ಸಂಪತ್ ಹಾಗೂ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಲಕ್ಷಾಂತರ ರೂ. ಹಣಕಾಸಿನ ವ್ಯವಹಾರ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ ಎಂದು ರಾಮರಾಜನ್ ತಿಳಿಸಿದ್ದಾರೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.