ಕಾಪು: ಸೌದಿ ಅರೇಬಿಯಾದಲ್ಲಿ ವಾಸವಿದ್ದ ಕುಟುಂಬವೊಂದರ ಕಾಪು ಬಳಿಯಿರುವ ಮನೆಮಲ್ಲಾರು ಆರ್. ಡಿ. ಮಂಜಿಲ್‌ಗೆ ಕಳ್ಳನೋರ್ವ ನುಗ್ಗಿ ನಗದು ಮತ್ತು ಬೆಲೆ ಬಾಳುವ ವಾಚ್‌ಗಳನ್ನು ಕದ್ದೊಯ್ದಿದ್ದ ಪ್ರಕರಣ ಸಂಬಂಧ ಅಂತರ್ ಜಿಲ್ಲಾ ಕಳವು ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ಗಾಂಧಿನಗರ ನಿವಾಸಿ ಸಂಜಯ್ ಕುಮಾರ್ (32) ಎಂದು ಗುರುತಿಸಲಾಗಿದೆ.
ಈತ ಉಳಿಯಾರಗೋಳಿ ಭಾರತ್ ನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂದು ತಿಳಿದು ಬಂದಿದೆ.
ಕಳವುಗೈದ ಮನೆಯ ಒಡತಿ ಸೌದಿ ಅರೇಬಿಯಾದಲ್ಲಿ ವಾಸವಿದ್ದು, ಅವರು ಪ್ರತಿ 2-3 ತಿಂಗಳಿಗೊಮ್ಮೆ ಕಾಪುವಿನಲ್ಲಿರುವ ತಮ್ಮ ಮನೆಗೆ ಬಂದು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಮನೆಯಲ್ಲಿ ಯಾರು ಇಲ್ಲದ ಖಚಿತಪಡಿಸಿಕೊಂಡ ಕಳ್ಳನು ಐದು ಸಾವಿರ ರೂ. ನಗದು ಮತ್ತು 60 ಸಾವಿರ ರೂ. ಮೌಲ್ಯದ 4 ವಾಚ್‌ಗಳು ಮಾತ್ರ ದೊರಕಿದ್ದು ಅವುಗಳನ್ನು ಕದ್ದೊಯ್ದು ಪರಾರಿಯಾಗಿದ್ದನು ಎಂದು ತಿಳಿದು ಬಂದಿದೆ.
ಈ ಘಟನೆ ಮೇ 1ರಂದು ಬೆಳಕಿಗೆ ಬಂದಿದ್ದು, ಸೌದಿ ಅರೇಬಿಯಾದಿಂದ ಬಂದ ಇಮ್ರಾನ್, ತನ್ನ ಮಾವ ಆಸಿಪ್ ಅಲಿ ಅವರಿಗೆ ಕರೆ ಮಾಡಿ ಮನೆಯ ಸಿ.ಸಿ ಕ್ಯಾಮರಾ ತಿರುಗಿದ ಬಗ್ಗೆ ಮಾಹಿತಿ ನೀಡಿದ್ದಾನೆ. ನಂತರದಲ್ಲಿ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲನ್ನು ಒಡೆದಿರುವುದು ಬೆಳಕಿಗೆ ಬಂದಿದ್ದು, ಬಳಿಕ ಇಮ್ರಾನ್ ಸಿಸಿ ಕೆಮರಾ ಪರಿಶೀಲಿಸಿದಾಗ ಮೇ 1ರಂದು ಬೆಳಗ್ಗೆ ಯಾರೋ ಕಳ್ಳರು ಮನೆಯ ಬಾಗಿಲನ್ನು ಬಲವಾದ ಆಯುಧದಿಂದ ಒಡೆದು ಡೈನಿಂಗ್ ಹಾಲ್ ಮೂಲಕ ಒಳಪ್ರವೇಶಿಸಿ ರೂಂನಲ್ಲಿನ ಕಪಾಟುಗಳನ್ನು ಜಖಂಗೊಳಿಸಿ ಸೊತ್ತುಗಳನ್ನು ಕಳವು ಮಾಡಿ ಹೋಗಿರುವುದು ತಿಳಿದು ಬಂದಿದೆ.
ಘಟನಾ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಕಾಪು ಸಿಪಿಐ ಜಯಶ್ರೀ ಮಾನೆ ಮಾರ್ಗದರ್ಶನ ಮತ್ತು ಎಸ್‌ಐ ತೇಜಸ್ವಿ ಅವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಯಿಂದ ಕಳವುಗೈದ ನಾಲ್ಕು ವಾಚ್‌ಗಳು ಮತ್ತು ಆತನ ಬಳಿಯಿದ್ದ ಪಲ್ಸರ್ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.